ಬೆಂಗಳೂರು:- ಬಿಜೆಪಿ ರಾಜ್ಯ ಘಟಕಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸುತ್ತಾರೋ ಅಥವಾ ಇರುವವರನ್ನೇ ಮುಂದುವರಿಸುತ್ತಾರೋ ಎಂಬ ಗೊಂದಲಕ್ಕೆ ಬಿಜೆಪಿ ಹೈಕಮಾಂಡ್ ಆದಷ್ಟು ಬೇಗ ಪೂರ್ಣ ವಿರಾಮ ಹಾಡಬೇಕು. ಕಲ್ಲು ಬಂಡೆಯನ್ನಾದರೂ ಅಧ್ಯಕ್ಷರನ್ನಾಗಿ ಮಾಡಿ, ಆದರೆ ಬೇಗ ಮಾಡಿ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಆಗ್ರಹಿಸಿದ್ದು, ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆಗೂ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕು. ಎನ್ಡಿಎ ಸಂಬಂಧ ಚೆನ್ನಾಗಿರಬೇಕು. ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಹೋರಾಟ ತೀವ್ರಗೊಳಿಸಬೇಕು. ಬಲಿಷ್ಠ ತಂಡ ಕಟ್ಟಲು ಸಮನ್ವಯ ಸಮಿತಿ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಸರಿಯಾದ ಸಮಯಕ್ಕೆ ಅಧ್ಯಕ್ಷರ ಆಯ್ಕೆ ಮಾಡುವ ಅಗತ್ಯವಿದೆ, ಇಲ್ಲದಿದ್ದರೆ ಗೊಂದಲಗಳು ಮುಂದುವರಿಯುತ್ತವೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನಾಗಲಿ, ವ್ಯತ್ಯಾಸ ಮಾಡುವವರನ್ನಾಗಲಿ ಕರೆಸಿ ಮಾತಾಡುವುದರಲ್ಲಿ ಅರ್ಥ ಇಲ್ಲ. ಶೀಘ್ರ ಕೋರ್ ಕಮಿಟಿ ಸಭೆ ನಡೆಸಿ ಒಂದಿಷ್ಟು ವಿಚಾರ ಚರ್ಚೆ ನಡೆಸಬೇಕು. ಒಳ್ಳೇಯದೋ, ಕೆಟ್ಟದೋ ಹೈಕಮಾಂಡ್ ತಕ್ಷಣ ಒಂದು ಪರಿಹಾರ ಸೂಚಿಸಲಿ ಎಂದು ಆಗ್ರಹಿಸಿದರು.
ಹೈಕಮಾಂಡ್ ಒಬ್ಬರನ್ನು ನಿಶ್ಚಿತ ಅಧ್ಯಕ್ಷ ಎಂದು ಆಯ್ಕೆ ಮಾಡಿದ ಮೇಲೆ ಅವರ ಮಾತನ್ನು ಅನುಸರಿಸಿ, ಅಧ್ಯಕ್ಷರ ಕೆಲಸಗಳಿಗೆ ಎಲ್ಲರೂ ಸಹಕಾರ ಕೊಡಬೇಕು. ಕೇಂದ್ರದ ನಾಯಕರು ವಿಳಂಬ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ನವರು ಕೊಡುತ್ತಿರುವ ಹಗರಣಗಳ ಪಟ್ಟಿ ನೋಡಿದರೆ ನಮ್ಮಂತ ಪುಣ್ಯವಂತರು ಯಾರೂ ಇಲ್ಲ. ಆದರೆ, ಇದನ್ನೆಲ್ಲ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವಾಗಿಲ್ಲ. ಈ ಗೊಂದಲವೇ ಪಕ್ಷದ ನಿಜವಾದ ವೇಗವನ್ನು ಕುಂಠಿತವಾಗಿಸಿದೆ.
ಯಡಿಯೂರಪ್ಪ ಸಕ್ರಿಯತೆಯನ್ನು ಸ್ವಾಗತಿಸಿದ ಅವರು, ಯಡಿಯೂರಪ್ಪ ಹಿರಿಯರು. ಅವರ ಲೆಕ್ಕಾಚಾರ ಯಾವ ರೀತಿ ಇದೆಯೋ ಗೊತ್ತಿಲ್ಲ. ಹಿಂದಿನಿಂದಲೂ ಅವರನ್ನು ನಾವು ಬಹಳ ದೊಡ್ಡ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಆದರೆ ಅವರು ಪಕ್ಷದ ಕಚೇರಿಗೆ ಬರುವುದು ಒಳ್ಳೆಯದು. ಅವರು ಪಕ್ಷದ ಆಧಾರ ಸ್ತಂಭ, ಪಕ್ಷದ ಕಚೇರಿಗೆ ಬಂದು ಪರಿಹಾರಗಳನ್ನು ಸೂಚಿಸಲು ಸಾಧ್ಯವಾಗುತ್ತದೆ. ಹಿಂದಿನಿಂದಲೂ ಅವರು ಸಕ್ರಿಯರಾಗಿದ್ದರು. ಆ ಬಳಿಕ ದೊಡ್ಡ ಮಟ್ಟದಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಈಗ ಏಕೆ ಬಂದರು ಎಂಬ ಕಾರಣ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಅಶೋಕ, ವಿಜಯೇಂದ್ರ ದೆಹಲಿಗೆ ಹೋದ ವಿಚಾರ ನನಗೆ ಗೊತ್ತಿಲ್ಲ, ನಮ್ಮಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯ ಕೆಂಡದಂತೆ ಕುದಿಯುತ್ತಿರುವುದು ಸತ್ಯ. ಇವನು ಏನಾದರೂ ಆದರೆ ಮುಂದೆ ಏನು ? ಎನ್ನುವವರೇ ಹೆಚ್ಚು. ಕೋರ್ ಕಮಿಟಿ ಯಲ್ಲಿ ವಿಷಯಾಧಾರಿತ ಚರ್ಚೆಗಳು ನಡೆಯುತ್ತಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರು ಇದ್ದಾರೆ. ಅವರಿಂದ ಸಲಹೆ ತಗೊಂಡು ಮಾಡುವ ಕೆಲಸ ಮಾಡುತ್ತಿಲ್ಲ. ಬರೀ ಶುದ್ಧೀಕರಣ ಅಲ್ಲ, ರಾಜಕಾರಣದಲ್ಲಿ ಸ್ನಾನವೇ ಆಗಬೇಕು. ವಿಜಯೇಂದ್ರ ಬದಲಾಯಿಸುವಂತೆ ಭಿನ್ನರು ನನ್ನ ಬಳಿ ಬಂದಿದ್ದು ನಿಜ. ಆದರೆ ನೀವು ನನ್ನ ಬಳಿ ದೂರು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ವರಿಷ್ಠರ ಬಳಿಯೇ ಹೇಳಿ ಎಂದು ಸಲಹೆ ನೀಡಿದ್ದೇನೆ ಎಂದು ಸದಾನಂದ ಗೌಡ ಹೇಳಿದರು.