ದಕ್ಷಿಣ ಕನ್ನಡ

ನಾಳೆಯಿಂದ ನಿಖಿಲ್ ಕುಮಾರಸ್ವಾಮಿಯ ‘ಜನರೊಂದಿಗೆ ಜನತಾದಳ’ 58 ದಿನಗಳ ಸಂಘಟನಾ ಪ್ರವಾಸ

ಬೆಂಗಳೂರು:- ರಾಜ್ಯ ರಾಜಕಾರಣದಲ್ಲಿ ಜೆಡಿಎಸ್​ (ಜನತಾದಳ ಸೆಕ್ಯುಲರ್) ಹೊಸ ಆಯಾಮದೊಂದಿಗೆ ಪಕ್ಷದ ಬಲವರ್ಧನೆಗೆ ಮುಂದಾಗಿದೆ. ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜೂನ್ 16ರಿಂದ ಅಂದರೆ ನಾಳೆಯಿಂದ ”ಜನರೊಂದಿಗೆ ಜನತಾದಳ” ಎಂಬ ಬೃಹತ್ ಸಂಘಟನಾ ಪ್ರವಾಸ ಆರಂಭಿಸಲಿದ್ದಾರೆ.
58 ದಿನಗಳ ಕಾಲ ನಡೆಯುವ ಈ ರಾಜ್ಯವ್ಯಾಪಿ ಯಾತ್ರೆಯು ತುಮಕೂರಿನಿಂದ ಆರಂಭವಾಗುವ ಯಾತ್ರೆಯು ರಾಜ್ಯದ 80 ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿವೆ.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳು ಕುಂಠಿತಗೊಂಡಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಮುಂದಾಗಿದೆ. ಈ ಪ್ರವಾಸದ ಮೂಲಕ, ಜೆಡಿಎಸ್-ಬಿಜೆಪಿ ಮೈತ್ರಿಯ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ತಂತ್ರಗಾರಿಕೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಪ್ರಭಾವ ದೊರೆಯುವಂತೆ ಮಾಡುವುದು ಮುಖ್ಯ ಲೆಕ್ಕಾಚಾರವಾಗಿದೆ. ನಿಖಿಲ್ ಅವರು ಈ ಯಾತ್ರೆಯ ಮೂಲಕ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸಿ, ಅವರಲ್ಲಿ ಉತ್ಸಾಹ ತುಂಬಲಿದ್ದಾರೆ. ಜೊತೆಗೆ, ಸ್ಥಳೀಯ ನಾಯಕರೊಂದಿಗೆ ಸಮಾಲೋಚಿಸಿ, ರಾಜ್ಯದಾದ್ಯಂತ ಜೆಡಿಎಸ್‌ನ ಜನಬೆಂಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ಪ್ರವಾಸದ ಒಂದು ವಿಶಿಷ್ಟ ಅಂಶವೆಂದರೆ ಕುಮಾರಸ್ವಾಮಿ ಪುತ್ರ ಯಾವುದೇ ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿಯುವುದಿಲ್ಲ ಬದಲಿಗೆ, ಪ್ರತಿ ರಾತ್ರಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅವರೊಡನೆ ಊಟ-ಉಪಚಾರಗಳನ್ನು ಸ್ವೀಕರಿಸಿ, ಆತ್ಮೀಯವಾಗಿ ಬೆರೆಯಲಿದ್ದಾರೆ. ಈ ಮೂಲಕ ಕಾರ್ಯಕರ್ತರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದು, ಪಕ್ಷದ ತಳಮಟ್ಟದ ಸಂಘಟನೆಯನ್ನು ಬಲಗೊಳಿಸುವ ಆಶಯ ಹೊಂದಿದ್ದಾರೆ. ಪ್ರತಿದಿನ ಎರಡು ತಾಲೂಕುಗಳಿಗೆ ಭೇಟಿ ನೀಡಿ, ಸ್ಥಳೀಯ ಕಾರ್ಯಕರ್ತರೊಂದಿಗೆ ನೇರವಾಗಿ ಸಂವಾದ ನಡೆಸುವುದು ಅವರ ಕಾರ್ಯಸೂಚಿಯಲ್ಲಿದೆ.

ಈ 58 ದಿನಗಳ ಪ್ರವಾಸದಲ್ಲಿ ಯಾವುದೇ ಬಹಿರಂಗ ಸಾರ್ವಜನಿಕ ಸಮಾವೇಶಗಳು ಅಥವಾ ಬೃಹತ್ ಸಮಾರಂಭಗಳು ಇರುವುದಿಲ್ಲ. ಬದಲಿಗೆ, ಪ್ರತಿಯೊಂದು ತಾಲೂಕಿನಲ್ಲಿಯೂ ಸ್ಥಳೀಯ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ‘ಕ್ಲೋಸ್ಡ್ ಡೋರ್’ (ಮುಚ್ಚಿದ ಬಾಗಿಲಿನ) ಸಭೆಗಳನ್ನು ನಡೆಸಲಾಗುತ್ತದೆ. ಈ ಸಭೆಗಳಲ್ಲಿ ಪಕ್ಷದ ಸಂಘಟನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆ, ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಆಳವಾದ ಚರ್ಚೆಗಳು ನಡೆಯಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ರೀತಿಯ ಸರಳ ಮತ್ತು ಗುರಿಗೆ ಕೇಂದ್ರೀಕೃತವಾದ ಪ್ರವಾಸವು ಜೆಡಿಎಸ್‌ನ ರಾಜಕೀಯ ತಂತ್ರಗಾರಿಕೆಯಲ್ಲಿ ಒಂದು ಹೊಸ ಪ್ರಯೋಗವಾಗಿದೆ.
ಈ ಪ್ರವಾಸದ ಅವಧಿಯಲ್ಲಿ ನಿಖಿಲ್ ಸುಮಾರು 10,000 ಕಿಲೋಮೀಟರ್‌ಗಳಷ್ಟು ಸಂಚರಿಸಲಿದ್ದಾರೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸಾಕಷ್ಟು ಸಮಯವನ್ನು ಮೀಸಲಿಟ್ಟು, ಕಾರ್ಯಕರ್ತರು ಮತ್ತು ನಾಯಕರ ವಿಶ್ವಾಸವನ್ನು ಗಳಿಸುವ ಯೋಜನೆ ಅವರದ್ದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಪಕ್ಷ ಹಲವು ರಾಜಕೀಯ ಸವಾಲುಗಳನ್ನು ಎದುರಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಿಗೆ ಕುಸಿದಿದ್ದ ಪಕ್ಷ, 2019ರ ಲೋಕಸಭೆಯಲ್ಲಿ ಒಂದೇ ಸ್ಥಾನಕ್ಕೆ ಸೀಮಿತವಾಗಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಗೆದ್ದು ಪಕ್ಷಕ್ಕೆ ಕಳೆ ಬಂದಿತ್ತು.