ನಾಳೆಯ ದಿನ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಆಹ್ವಾನ ನೀಡದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಶಿಷ್ಟಾಚಾರವನ್ನು ಉಲ್ಲಂಘಿಸಿ, ಬೆಂಗಳೂರಿನ ಶಾಸಕರೂ ಆಗಿರುವ ವಿಪಕ್ಷ ನಾಯಕನನ್ನೇ ಕಡೆಗಣಿಸಿ, ಶಿಕಾರಿಪುರದ ಶಾಸಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಆಹ್ವಾನ ನೀಡಿರುವುದು, ಅಶೋಕ್ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಪ್ರಕಾರ, ವಿರೋಧ ಪಕ್ಷದ ನಾಯಕನಿಗೆ ಪ್ರಮುಖ ಸ್ಥಾನಮಾನವಿದೆ. ಅದರಲ್ಲೂ ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ನಡೆಯುತ್ತಿರುವಾಗ, ಸ್ಥಳೀಯ ಶಾಸಕರೂ ಆಗಿರುವ ಆರ್.ಅಶೋಕ್ ಅವರಿಗೆ ಆಹ್ವಾನ ನೀಡುವುದು ಕಡ್ಡಾಯವಾಗಿತ್ತು. ಆದರೆ, ಅವರನ್ನು ಕಡೆಗಣಿಸಿ ಪಕ್ಷದ ರಾಜ್ಯಾಧ್ಯಕ್ಷರಾದರೂ ಬೆಂಗಳೂರಿಗೆ ಸಂಬಂಧಿಸದ ಶಾಸಕರಾದ ವಿಜಯೇಂದ್ರ ಅವರಿಗೆ ಮಣೆ ಹಾಕಿರುವುದು, ಬಿಜೆಪಿ ಪಾಳಯದಲ್ಲಿಯೇ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ.
ವಿರೋಧ ಪಕ್ಷದ ನಾಯಕನಾಗಿ ಅಶೋಕ್ ಅವರಿಗೆ ಸಿಗಬೇಕಿದ್ದ ಗೌರವವನ್ನು ನೀಡಲಾಗಿಲ್ಲ. ವಿಜಯೇಂದ್ರ ಅವರಿಗಿಂತ ಮೊದಲು, ಶಿಷ್ಟಾಚಾರದ ಪ್ರಕಾರ ಅಶೋಕ್ ಅವರಿಗೇ ಆಹ್ವಾನ ನೀಡಬೇಕಿತ್ತು ಎಂಬುದು ನಿಯಮ. ಈ ಘಟನೆಯು ಕೇವಲ ಶಿಷ್ಟಾಚಾರ ಉಲ್ಲಂಘನೆಯಷ್ಟೇ ಅಲ್ಲದೆ, ಪಕ್ಷದೊಳಗಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯದ ಚರ್ಚೆಗೂ ಕಾರಣವಾಗಿದೆ. ತಮ್ಮನ್ನು ಕಾರ್ಯಕ್ರಮದಿಂದ ಹೊರಗಿಟ್ಟಿರುವುದಕ್ಕೆ ಅಶೋಕ್ ಅವರು ತೀವ್ರ ಬೇಸರಗೊಂಡಿದ್ದು, ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
Leave feedback about this