ಮಂಗಳೂರು:- ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆಕ್ಷನ್ ಫೋರ್ಸ್ ಗೃಹ ಸಚಿವ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿ ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹೆಗಲಿಗೆ ಈ ವಿಶೇಷ ಕಾರ್ಯ ಪಡೆಯ ಹೆಚ್ಚುವರಿ ಹೊಣೆ ಇರಲಿದೆ, ಮಂಗಳೂರು ನಗರ ಕೇಂದ್ರದಲ್ಲಿಯೇ ಎಸ್ಎಎಫ್ ಕಾರ್ಯಪಡೆಯ ಕೇಂದ್ರ ಕಚೇರಿ ಇರಲಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ ಹೊಸ ಪಡೆಗೆ ನಿಯೋಜನೆ ಮಾಡಲಾಗಿದೆ. ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ ಸ್ಪೆಕ್ಟರ್, 16 ಪಿಎಸ್ಐ ಸೇರಿದಂತೆ ಒಟ್ಟು 248 ಸಿಬ್ಬಂದಿ ತಂಡದಲ್ಲಿದ್ದಾರೆ. ಈ ತಂಡ ಸಂಭಾವ್ಯ ಕೋಮು ಹಿಂಸಾಚಾರ, ಕೋಮು ಗಲಭೆಯ ಸಂಚು, ಮೂಲಭೂತವಾದಿ ಚಟುವಟಿಕೆ ನಿಗ್ರಹ ಸೇರಿದಂತೆ ಗುಪ್ತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಿದೆ. ಆ ಮೂಲಕ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಟುವಟುಕೆ ಮೇಲೂ SAF ತೀವ್ರ ನಿಗಾ ಇಡಲಿದೆ.
ಕಳೆದೊಂದು ತಿಂಗಳಿಂದ ಕೋಮು ಗಲಾಟೆ, ದ್ವೇಷದ ಕೊಲೆಗಳನ್ನು ಕಂಡ ಮಂಗಳೂರಿಗೆ ಈ ಆಕ್ಷನ್ ಫೋರ್ಸ್ ಕೊಂಚ ನಿರಾಳವನ್ನು ತಂದಿದೆ. ನಗರದ ಹಲವು ಠಾಣೆಗಳಿಗೆ ಖಡಕ್ ಇನ್ಸ್ಪೆಪೆಕ್ಟರ್ಗಳನ್ನು ನಿಯೋಜಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ. ಕೋಮು ದ್ವೇಷ, ಗಲಭೆಗಳಲ್ಲಿ ಭಾಗವಹಿಸಿದರೆ ಮುಲಾಜಿಲ್ಲದೇ ಹೆಡೆಮುರಿ ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ರಫ್&ಟಫ್ ನಡೆ ಕಿಡಿಗೇಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಒಟ್ಟಿನಲ್ಲಿ ಸರಣಿ ಕೊಲೆಗಳಿಗೆ ಪತರುಗುಟ್ಟಿದ್ದ ಮಂಗಳೂರಿಗೆ ಭರವಸೆಯ ನೂತನ ಆಕ್ಷನ್ ಫೋರ್ಸ್ ಅಸ್ತಿತ್ವಕ್ಕೆ ಬಂದಿದೆ. ಈ ಫೋರ್ಸ್ ನಿಂದ ಕೋಮು ದ್ವೇಷದ ಸದ್ದಡಗಲಿ, ಶಾಂತಿ ಸೌಹಾರ್ದತೆ ಕರಾವಳಿಯಲ್ಲಿ ನೆಲೆಸಲಿ ಅನ್ನೋದು ಸರ್ವ ಜನರ ಆಶಯವಾಗಿದೆ.