ಬೆಂಗಳೂರು:- ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟದಿಂದ ಈವರೆಗೂ ಪರಿಷತ್ತಿನ 4 ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ಪರಿಷತ್ತಿನಲ್ಲಿ ಪ್ರತಿಪಕ್ಷಗಳನ್ನು ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಬಹುದು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಭಾನುವಾರ ದೆಹಲಿಗೆ ಭೇಟಿ ನೀಡಿರುವುದರಿಂದ ಪರಿಷತ್ ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಯು.ಬಿ ವೆಂಕಟೇಶ್, ಪ್ರಕಾಶ್ ಕೆ ರಾಥೋಡ್ ಅವಧಿ 2024ರ ಅಕ್ಟೋಬರ್ ತಿಂಗಳಿಗೆ ಪೂರ್ಣಗೊಂಡಿತ್ತು. ಜೆಡಿಎಸ್ ಪಕ್ಷದ ಕೆ ಎ ತಿಪ್ಪೇಸ್ವಾಮಿ ಅವಧಿ ಜನವರಿಗೆ ಮುಕ್ತಾಯವಾಗಿತ್ತು. ಇನ್ನು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನವೂ ತೆರವಾಗಿತ್ತು. ಈ ನಾಲ್ಕೂ ಸ್ಥಾನಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿತ್ತು.
ಈ ಹಿಂದೆ ಫೈನಲ್ ಮಾಡಿದ್ದ ಹೆಸರುಗಳಲ್ಲಿ ಕೆಲವು ಅಡಚಣೆಗಳು ಇದ್ದವು. ಆರತಿ ಕೃಷ್ಣ (ಎನ್‌ಆರ್‌ಐ ವೇದಿಕೆ), ರಮೇಶ್ ಬಾಬು (ಅಧ್ಯಕ್ಷರು, ಪಿಸಿಸಿ ಮಾಧ್ಯಮ ಕೋಶ) ಡಿ ಜಿ ಸಾಗರ್ (ದಲಿತ ಕಾರ್ಯಕರ್ತ) ಮತ್ತು ದಿನೇಶ್ ಅಮೀನ್ ಮಟ್ಟು (ಸಿಎಂ ಮಾಧ್ಯಮ ತಂಡ) ಹೆಸರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು.
ಪರಿಷತ್ತಿನ ಅಧ್ಯಕ್ಷ ಬಸವರಾಜ್ ಹೊರಟ್ಟಿ ಮತ್ತು ಉಪಾಧ್ಯಕ್ಷ ಎಂ ಕೆ ಪ್ರಾಣೇಶ್ರನ್ನು (ಇಬ್ಬರೂ ಬಿಜೆಪಿಯಿಂದ ಆಯ್ಕೆಯಾದವರು) ಪದಚ್ಯುತಗೊಳಿಸಲು 15 ದಿನಗಳ ನೋಟಿಸ್ ನೀಡಬೇಕಾಗಿದೆ. ಏಕೆಂದರೆ ಮುಂದಿನ ಶಾಸಕಾಂಗ ಅಧಿವೇಶನ ಆಗಸ್ಟ್‌ನಲ್ಲಿ ಪ್ರಾರಂಭವಾಗುತ್ತದೆ.
Leave feedback about this