Uncategorized

ಪ್ರಿಯಾ ಮರಣ ದಂಡನೆ: ಸುಲ್ತಾನುಲ್ ಉಲಮಾ ಇಂಡಿಯನ್ ಗ್ರಾಂಡ್ ಮುಫ್ತಿ ಪ್ರಯತ್ನ ಸಫಲ.!

ಯೆಮೆನ್‌:- ಇಂದು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಆಕೆಯ ಮರಣದಂಡನೆಯನ್ನು ಜುಲೈ16ರ ಬುಧವಾರವಾದ ಇಂದು ನಿಗದಿಪಡಿಸಲಾಗಿತ್ತು.

ಯೆಮೆನ್‌ನ ವಿಚಾರಣಾ ನ್ಯಾಯಾಲಯವು ಯೆಮೆನ್ ಪ್ರಜೆಯನ್ನು ಕೊಂದ ಆರೋಪದಲ್ಲಿ 37 ವರ್ಷದ ನರ್ಸ್‌ಗೆ ಶಿಕ್ಷೆ ವಿಧಿಸಿದ ನಂತರ ಅವರನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು, ಈ ನಿರ್ಧಾರವನ್ನು ದೇಶದ ಸುಪ್ರೀಂ ನ್ಯಾಯಾಂಗ ಮಂಡಳಿಯು ನವೆಂಬರ್ 2023 ರಲ್ಲಿ ಎತ್ತಿಹಿಡಿದಿತ್ತು.

ಕೇಂದ್ರ ಸರ್ಕಾರ ಪ್ರಯತ್ನ ಕೈಚೆಲ್ಲಿದ ನಂತರ ಮರಣ ದಂಡನೆ ವಿಚಾರದ ಮಧ್ಯಸ್ಥಿಕೆ ವಹಿಸಿದ ಸುಲ್ತಾನುಲ್ ಉಲಮಾ ಇಂಡಿಯನ್ ಗ್ರಾಂಡ್ ಮುಫ್ತಿ ತಮ್ಮ ಪ್ರಯತ್ನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಈ ವಿಷಯದಲ್ಲಿ ಪ್ರಮುಖವಾದ ನಡೆ ಶೈಖ್ ಹಬೀಬ್ ಉಮರ್ ಅವರ ನಿರ್ದೇಶನದ ಮೇರೆಗೆ ನಿನ್ನೆ ಉತ್ತರ ಯೆಮನ್‌ ನಲ್ಲಿ ನಡೆದ ತುರ್ತು ಸಭೆಯಾಗಿತ್ತು. ಹಬೀಬ್ ಉಮರ್ ಅವರ ಪ್ರತಿನಿಧಿ ಹಬೀಬ್ ಅಬ್ದುರ್ರಹ್ಮಾನ್ ಅಲಿ ಮಶ್ಹೂರ್, ಯೆಮನ್ ಸರ್ಕಾರದ ಪ್ರತಿನಿಧಿಗಳು, ಸನಾದ ಜಿನಾಯತ್ ನ್ಯಾಯಾಲಯದ ಸುಪ್ರೀಂ ನ್ಯಾಯಾಧೀಶರು, ಕೊಲ್ಲಲ್ಪಟ್ಟ ತಲಾಲ್‌ ನ ಸಹೋದರ, ಬುಡಕಟ್ಟು ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು. ಕುಟುಂಬದಲ್ಲಿ ಈ ವಿಷಯವನ್ನು ವಿಶ್ಲೇಷಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ತಲಾಲ್‌ ನ ಸಂಬಂಧಿಕರು ಸಭೆಯಲ್ಲಿ ತಿಳಿಸಿದರು ಎಂದು ಅವರು ಹೇಳಿದ್ದಾರೆ.

ನಿನ್ನೆಯ ದಿನ ಮಂಗಳವಾರದ ದಿನವು ಬಹಳ ನಿರ್ಣಾಯಕವಾಗಿತ್ತು, ಬುಡಕಟ್ಟು ನಾಯಕರು ಮತ್ತು ತಲಾಲ್ ನ ಕಾನೂನು ಸಮಿತಿ ಸದಸ್ಯರು ಹಾಗೂ ಕುಟುಂಬಗಳೊಂದಿಗಿನ ಚರ್ಚೆ ಮಂಗಳವಾರ ಬೆಳಿಗ್ಗೆಯೂ ಮುಂದುವರೆಯಿತು. ಈ ವಿಷಯದಲ್ಲಿ ಶುಭ ಸುದ್ದಿ ಬರುವವರೆಗೂ ಹಬೀಬ್ ಅಬ್ದುರ್ರಹ್ಮಾನ್ ಮಶ್ಹೂರ್ ಅವರ ನೇತೃತ್ವದ ಶೈಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರ ಪ್ರತಿನಿಧಿ ತಂಡವು ತಲಾಲ್ ನ ಸ್ಥಳವಾದ ಉತ್ತರ ಯೆಮನ್‌ ನ ದಮಾರ್‌ನಲ್ಲಿಯೇ ಉಳಿದುಕೊಂಡಿತ್ತು. ಕುಟುಂಬಗಳ ನಡುವೆ ಏಕರೂಪದ ಅಭಿಪ್ರಾಯಕ್ಕೆ ಬರಲು ಪ್ರಯತ್ನಗಳು ಮುಂದುವರಿದಿದ್ದವು ಎಂದು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ವಿವರಿಸಿದ್ದಾರೆ.

ಅದೇ ಸಮಯದಲ್ಲಿ, ಕೊಲ್ಲಲ್ಪಟ್ಟ ತಲಾಲ್ ನ ನಿಕಟ ಸಂಬಂಧಿ ಮತ್ತು ಹುದೈದಾ ರಾಜ್ಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಯೆಮನ್ ಶೂರಾ ಕೌನ್ಸಿಲ್ ಸದಸ್ಯರಾದ ನ್ಯಾಯಮೂರ್ತಿ ಮುಹಮ್ಮದ್ ಬಿನ್ ಅಮೀನ್ ಅವರು ಶೈಖ್ ಹಬೀಬ್ ಉಮರ್ ಅವರ ನಿರ್ದೇಶನದ ಮೇರೆಗೆ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ, ಶಿಕ್ಷೆಯ ಕ್ರಮಗಳನ್ನು ಮುಂದೂಡಲು ಕುಟುಂಬ ಸದಸ್ಯರ ನಡುವೆ ಒಪ್ಪಂದ ಮಾಡಿಕೊಂಡು, ನ್ಯಾಯಾಲಯವನ್ನು ಸಂಪರ್ಕಿಸಿದರು. ಅದರ ನಂತರವೇ ಶಿಕ್ಷೆಯನ್ನು ಮುಂದೂಡಿದ ತೀರ್ಪು ಈಗ ಹೊರಬಿದ್ದಿದೆ ಎಂದು ಎ ಪಿ ಉಸ್ತಾದ್ ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರ ಯೆಮನ್‌ ನ ಬುಡಕಟ್ಟು ಸಮುದಾಯಗಳ ನಡುವೆ ಭಾವನಾತ್ಮಕವಾಗಿ ಕೆರಳಿದ ಪ್ರಕರಣ ಇದಾಗಿದೆ. ಹಾಗಾಗಿ, ಇಷ್ಟು ಕಾಲ ಕುಟುಂಬದೊಂದಿಗೆ ಮಾತನಾಡುವುದು ಕೂಡ ಸಾಧ್ಯವಾಗಿರಲಿಲ್ಲ. ಈಗ ಕುಟುಂಬದೊಂದಿಗೆ ಚರ್ಚೆ ನಡೆಸಲು ಸಾಧ್ಯವಾಗಿದೆ ಮತ್ತು ಯೆಮನ್‌ ನ ಕಾನೂನು ಕ್ಷೇತ್ರದಲ್ಲಿನ ಪ್ರಮುಖರೂ ಸಹ ಹಬೀಬ್ ಉಮರ್ ಅವರ ಆಸಕ್ತಿಯಿಂದ ಇದರಲ್ಲಿ ಮಧ್ಯಪ್ರವೇಶಿಸಿದರು. ಅದೇ ಈ ವಿಷಯದಲ್ಲಿ ದೊಡ್ಡ ಭರವಸೆ ಎಂದು ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಜುಲೈ 16ರಂದು ಜಾರಿಯಾಗಬೇಕಿದ್ದ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಯೆಮನ್ ಸಾರ್ವಜನಿಕ ಪ್ರಾಸಿಕ್ಯೂಷನ್ ವಿಶೇಷ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾದ ರಿಝ್ವಾನ್ ಅಹ್ಮದ್ ಅಲ್-ವಜ್ರಾ ಮತ್ತು ಸ್ವರೀಮುದ್ದೀನ್ ಮುಫದ್ದಲ್ ಅವರು ಸಹಿ ಮಾಡಿದ ತೀರ್ಪಿನ ಪ್ರತಿಯಲ್ಲಿದೆ. ಕುಟುಂಬದೊಂದಿಗಿನ ಚರ್ಚೆಗಳು ಇನ್ನೂ ಮುಂದುವರೆಯಲಿದೆ. ಮರಣದಂಡನೆಯಿಂದ ಮುಕ್ತಿ ಪಡೆಯುವ ಪ್ರಯತ್ನಗಳು ನಡೆಯಲಿದೆ. ಇಲ್ಲಿಯವರೆಗೆ ಆದಂತೆಯೇ ಈ ವಿಷಯದಲ್ಲೂ ಸಾಮೂಹಿಕ ಕಾರ್ಯಗಳು, ಪ್ರಯತ್ನಗಳು ಮತ್ತು ಪ್ರಾರ್ಥನೆಗಳು ಅವಶ್ಯಕವಾಗಿವೆ. ಈ ವಿಷಯದಲ್ಲಿ ಇದುವರೆಗಿನ ಪ್ರಗತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.