ಬೆಂಗಳೂರು

ಬಿಜೆಪಿಯ ತ್ರಿವಳಿ ಬಣದ ಜವಾಬ್ದಾರಿ ಕೇಂದ್ರ ಸಚಿವ ಜೋಷಿ ಹೆಗಲಿಗೆ

ಬೆಂಗಳೂರು:- ಆರೆಸ್ಸೆಸ್‌ ಪ್ರಮುಖರ ಸಲಹೆ ಹಿನ್ನೆಲೆಯಲ್ಲಿ ಬಿಜೆಪಿಯ ತ್ರಿವಳಿ ಬಣಗಳು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದು, ಭಿನ್ನಮತ ಮರೆತು ಸಂಘಟನ ವ್ಯವಸ್ಥೆಯಲ್ಲಿ ಹೆಜ್ಜೆ ಹಾಕುವುದಕ್ಕೆ ಮೊದಲ ಪ್ರಯತ್ನ ನಡೆದಿದೆ.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಬದಲಾವಣೆ ಚರ್ಚೆಯ ಮಧ್ಯೆಯೇ ಈ ಬೆಳವಣಿಗೆ ನಡೆದಿದ್ದು, ವಿಜಯೇಂದ್ರ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಮುಖಾಮುಖಿಯಾಗಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಈ ಸಮರಸ ಸಭೆಯ ನೇತೃತ್ವ ವಹಿಸಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ, ಯಾವ ಬಣದಲ್ಲೂ ಗುರುತಿಸಿಕೊಳ್ಳದ ಡಿ.ವಿ.ಸದಾನಂದ ಗೌಡ, ಸಿ.ಟಿ.ರವಿ, ಎನ್‌. ರವಿಕುಮಾರ್‌, ತಟಸ್ಥ ಬಣದ ಸುನಿಲ್‌ ಕುಮಾರ್‌, ಡಾ.ಅಶ್ವಥ್ ನಾರಾಯಣ್, ಭಿನ್ನರ ಬಣದ ಅರವಿಂದ ಲಿಂಬಾವಳಿ ಭಾಗವಹಿಸಿದ್ದರು.

ಲಿಂಬಾವಳಿ ಹಾಗೂ ವಿಜಯೇಂದ್ರ ಈ ಸಭೆಯಲ್ಲಿ ಪರಸ್ಪರ ಹಸ್ತಲಾಘವ ಮಾಡಿಕೊಂಡದ್ದು ವಿಶೇಷವಾಗಿತ್ತು. ಸಭೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಹಾಗೂ ಜಿಲ್ಲಾ ಪ್ರವಾಸದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ. ಪಕ್ಷದ ಎಲ್ಲಾ ನಾಯಕರಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ ಪ್ರಯತ್ನವಾಗಿ ಈ ಸಭೆ ನಡೆದಿದೆ. ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ಹಾಗೂ ಸಂಘಟನ ಚಟುವಟಿಕೆ ನಡೆಸುವಂತೆ ಕಳೆದ ವಾರ ನಡೆದ ಸಂಘದ ಪ್ರಮುಖರ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಈ ಸಭೆ ನಡೆದಿದೆ ಎನ್ನಲಾಗಿದೆ.

ಬಣಗಳ ನಡುವೆ ಸಂಧಾನ ಹಾಗೂ ವಿಶ್ವಾಸ ಮೂಡಿಸುವ ಜವಾಬ್ದಾರಿಯನ್ನು ವರಿಷ್ಠರು ಜೋಷಿ ಹೆಗಲಿಗೆ ಏರಿಸಿದ್ದು ದಿಲ್ಲಿ ಪ್ರವಾಸದ ಹಿನ್ನೆಲೆಯಲ್ಲಿ ಅಶೋಕ್‌, ಕ್ಷೇತ್ರ ಪ್ರವಾಸದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಸಭೆಯಿಂದ ದೂರ ಉಳಿದಿದ್ದರು. ಕೋರ್‌ ಕಮಿಟಿಯಲ್ಲಿ ಚರ್ಚೆಯಾದ ವಿಷಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕೆಂಬ ಸಲಹೆಯನ್ನು ಡಿ.ವಿ.ಸದಾನಂದ ಗೌಡ ನೀಡಿದರು ಎನ್ನಲಾಗಿದೆ.

ಸಭೆ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತ್ಯೇಕ ತಂಡಗಳನ್ನು ಮಾಡಿ ಜಿಲ್ಲಾ ಪ್ರವಾಸ ಮಾಡುವುದು, ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದರ ಸಹಿತ ಸಂಘಟನಾತ್ಮಕ ವಿಷಯಗಳ ಬಗ್ಗೆ ಇಂದು ಚರ್ಚಿಸಿದ್ದೇವೆ. ಜಿಲ್ಲೆಗಳಲ್ಲಿ ಇರುವ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದಿದ್ದಾರೆ.