ಬೆಂಗಳೂರು:- ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ, ವಿಜಯಪುರ ನಗರ ಅಸೆಂಬ್ಲಿ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಯಡಿಯೂರಪ್ಪ ಕುಟುಂಬದ ವಿರುದ್ದದ ಟೀಕಾ ಪ್ರಹಾರ ಮುಂದುವರಿದಿದೆ. ಜೊತೆಗೆ, ಮುಂದಿನ ಅಧ್ಯಕ್ಷರು ಯಾರು ಎನ್ನುವ ವಿಚಾರದಲ್ಲಿ ಭವಿಷ್ಯವನ್ನೂ ನುಡಿದಿದ್ದಾರೆ.
ಯತ್ನಾಳ್ ಹೇಳುವ ಪ್ರಕಾರ ಕೇಂದ್ರ ಸಚಿವ ವಿ.ಸೋಮಣ್ಣನವರ ಹೆಸರೂ ಚರ್ಚೆಯಲ್ಲಿದೆ, ಹಿಂದೆಯೂ ಕೂಡಾ ಸೋಮಣ್ಣ ಹೆಸರು ಕೇಳಿ ಬಂದಿತ್ತು. ಅವರು ಕೂಡಾ, ಈ ಹುದ್ದೆಯನ್ನು ನಿಭಾಯಿಸಲು ಒಲ್ಲೆ ಎಂದೇನೂ ಹೇಳಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆ, ಯಡಿಯೂರಪ್ಪ ಕುಟುಂಬದ ಜೊತೆಗೆ ಸೋಮಣ್ಣ ಬೇಸರ ಮಾಡಿಕೊಂಡಿದ್ದರು. ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ, ಅವರಿಗೆ ಸೋಲಾಗಿತ್ತು. ಸೋಲಿಗೆ ಒಂದು ಕುಟುಂಬವನ್ನು ಸೋಮಣ್ಣ ದೂರಿದ್ದರು. ಇದಾದ ನಂತರ, ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸೋಮಣ್ಣ ಗೆದ್ದಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಇವರಿಗೆ ಕಣ್ಣಿದೆ. ಕೇಂದ್ರ ಸಚಿವ ವಿ.ಸೋಮಣ್ಣರ ಹೆಸರೂ ಕೂಡಾ ಚಾಲ್ತಿಯಲ್ಲಿದೆ.
ವಿಜಯೇಂದ್ರ ಹೊರತಾಗಿ ಯಾರಾದರೂ ಬಿಜೆಪಿ ಅಧ್ಯಕ್ಷರಾಗಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಉಲ್ಲೇಖಿಸಿರುವ ಎರಡನೇಯ ಹೆಸರುಗಳು ಚರ್ಚೆಯಲ್ಲಿ ಇರುವುದಂತೂ ಹೌದು. ಎರಡನೇ ಹೆಸರು ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್. ಇದು ಬಿಜೆಪಿ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ವಿಜಯೇಂದ್ರ ಹೊರತಾಗಿ, ಯಾರೇ ಪಾರ್ಟಿಯ ಅಧ್ಯಕ್ಷರಾದರೂ ತಮಗೇನೂ ತಕರಾರು ಇಲ್ಲ ಎನ್ನುವುದನ್ನು ಯತ್ನಾಳ್ ಸಾರಿಸಾರಿ ಹೇಳಿದ್ದಾರೆ. ಆದರೆ, ಒಂದು ಕಡೆ ರಾಷ್ಟ್ರಾಧ್ಯಕ್ಷ ಹುದ್ದೆಯ ಹೆಸರು ಅಂತಿಮಗೊಂಡಿಲ್ಲ. ಇನ್ನೊಂದು ಕಡೆ, ರಾಜ್ಯ ಘಟಕದ ಅಧ್ಯಕ್ಷರ ಘೋಷಣೆಯಾಗುತ್ತಿಲ್ಲ. ಇದನ್ನು, ವಿಪಕ್ಷದ ನಾಯಕರು ವ್ಯಂಗ್ಯವಾಡುತ್ತಿದ್ದರೆ, ಕಾರ್ಯಕರ್ತರು/ಮುಖಂಡರಿಗೂ ಇದು ಕಸಿವಿಸಿಯನ್ನು ತರುತ್ತಿದೆ.
Leave feedback about this