ಚಿಕ್ಕಮಗಳೂರು:- ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ಹುದ್ದೆಗೆ ಮೂರ್ನಾಲ್ಕು ಹೆಸರುಗಳು ಕೇಳಿ ಬರುತ್ತಿದೆ. ಈ ನಡುವೆ, ಹಾಲೀ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷದ ನಾಯಕ ಆರ್.ಅಶೋಕ್ ದೆಹಲಿಯಲ್ಲಿ ಬೇರೆ ಬೀಡು ಬಿಟ್ಟಿದ್ದಾರೆ.
ಈ ವಾರಾಂತ್ಯದೊಳಗೆ ರಾಜ್ಯಾಧ್ಯಕ್ಷರ ಹುದ್ದೆಗೆ ಹೆಸರು ಅಂತಿಮಗೊಳ್ಳಬಹುದು ಎನ್ನುವ ಸುದ್ದಿಯ ನಡುವೆ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆಸರು ಚಲಾವಣೆಗೆ ಬಂದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಪ್ರಬಲ ಲಿಂಗಾಯತ ಸಮುದಾಯದ ನಾಯಕರ ಹೊರತಾಗಿ, ಬಿಜೆಪಿ ಮಣೆ ಹಾಕಿತೇ ಎನ್ನುವುದು ಪ್ರಶ್ನೆಯಾಗಿದೆ. ಇನ್ನೊಂದು ಕಡೆ, ರಾಷ್ಟ್ರಾಧ್ಯಕ್ಷ ಸ್ಥಾನಕ್ಕೂ, ಜುಲೈ ಮೊದಲ ವಾರದಲ್ಲಿ ಹೆಸರು ಘೋಷಣೆಯಾಗುವ ಸಾಧ್ಯತೆ ಕೂಡ ಇದೆ.
ಯಾವ ಕ್ಯಾಂಪಿನಲ್ಲೂ ತಮ್ಮನ್ನು ಗುರುತಿಸಿಕೊಳ್ಳದೇ ಎಲ್ಲರ ಜೊತೆ ಒಂದಾಗಿ ಕೆಲಸವನ್ನು ಮಾಡುತ್ತಿರುವ ಇವರು ವೈಯಕ್ತಿಕ ಕಾರಣ ನೀಡಿ ಪಕ್ಷ ಚಟುವಟಿಕೆಯಿಂದ ದೂರವಿರುವ ನಿರ್ಧಾರಕ್ಕೆ ಬರುವ ಮಾತನ್ನು ಆಡಿದ್ದರು. ಆದರೆ, ಈಗ ಅವರ ಹೆಸರನ್ನು ಫೈನಲ್ ಮಾಡಬೇಕೆಂದು ತಟಸ್ಥ ಬಣ ಲಾಬಿ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.
ಬಿಲ್ಲವ ಸಮುದಾಯದ ಸುನಿಲ್ ಕುಮಾರ್, ವಿಜಯೇಂದ್ರ ಅಧ್ಯಕ್ಷರಾದ ಆರಂಭದ ದಿನಗಳಲ್ಲಿ ಸುನಿಲ್ ಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಆದರೆ, ಸ್ವಲ್ಪದಿನದ ನಂತರ ಅವರನ್ನು ಆ ಹುದ್ದೆಯನ್ನು ತೊರೆದಿದ್ದರು. ನಾನು ಅವರಿಗೆ ಏನೂ ಅನ್ಯಾಯ ಮಾಡಿಲ್ಲ, ಆದರೂ ಅವರು ಸ್ಥಾನವನ್ನು ತ್ಯಜಿಸಿದರು ಎನ್ನುವ ಮಾತನ್ನು ವಿಜಯೇಂದ್ರ ಆಡಿದ್ದರು. ಈಗ, ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ಹಲವು ನಾಯಕರು, ಸುನಿಲ್ ಕುಮಾರ್ ಹೆಸರನ್ನು ಮುನ್ನಲೆಗೆ ತಂದಿದ್ದಾರೆ.
ಲಿಂಗಾಯತ ಸಮುದಾಯವು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ಇಂತಹ ಸಮಯದಲ್ಲಿ ವಿಜಯೇಂದ್ರ ಅಲ್ಲದೇ, ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ಕೊಡುವ ರಿಸ್ಕ್ ಅನ್ನು ತೆಗೆದುಕೊಳ್ಳುತ್ತಾ? ಯಡಿಯೂರಪ್ಪನವರು ಸಮುದಾಯದ ಪ್ರಶ್ನಾತೀತ ನಾಯಕರು, ಅದೇ ಮಾತು ವಿಜಯೇಂದ್ರಗೆ ಅವರಿಗೆ ಅನ್ವಯಿಸುತ್ತದಾ? ಎನ್ನುವುದು ತಟಸ್ಥ ಬಣದ ಹಲವು ನಾಯಕರ ವಾದ. ಜೊತೆಗೆ, ವಿಜಯೇಂದ್ರ ಅವರಿಗೆ ಅಧ್ಯಕ್ಷ ಹುದ್ದೆಯನ್ನು ಕೊಟ್ಟರೆ, ಆಂತರಿಕ ಬಿಕ್ಕಟ್ಟು ಕಮ್ಮಿಯಾಗುತ್ತೆ ಎನ್ನುವುದಕ್ಕೆ ಏನು ಗ್ಯಾರಂಟಿ ಎನ್ನುವುದೂ ಪ್ರಶ್ನೆಯಾಗಿದೆ.
ವೆರಿ ಇಂಟರೆಸ್ಟಿಂಗ್ ಸ್ಟೋರಿ ಏನಂದರೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕೂಡಾ ಬಿಜೆಪಿ ಅಧ್ಯಕ್ಷ ಹುದ್ದೆಗೆ ಪ್ರಯತ್ನವನ್ನು ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ. ಪ್ರಧಾನಿ ಮೋದಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಪಕ್ಷದ ಸೂಚನೆಯಂತೆ ಸ್ಪರ್ಧಿಸಿ, ಸಿದ್ದರಾಮಯ್ಯನವರಿಗೆ ಉತ್ತಮ ಪೈಪೋಟಿ ನೀಡಿದ್ದೇನೆ. ವಿಜಯೇಂದ್ರ ಬದಲಾಯಿಸುವ ಚಿಂತನೆ ಇದ್ದರೆ, ನನ್ನನ್ನೇ ಆ ಹುದ್ದೆಗೆ ಪರಿಗಣಿಸಿ ಎನ್ನುವ ಮನವಿಯನ್ನು ಸೋಮಣ್ಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿ.ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ತಪ್ಪಿಸಲು, ಬಿಜೆಪಿಯ ಭಿನ್ನಬಣದ ನಾಯಕರು ಲಾಸ್ಟ್ ಮಿನಿಟ್ ಕೆಲಸವನ್ನು ಜೋರಾಗಿ ಮಾಡುತ್ತಿದ್ದಾರೆ. ವಿಜಯೇಂದ್ರ ಹೊರತಾಗಿ ಯಾರಿಗೆ ಅಧ್ಯಕ್ಷ ಹುದ್ದೆ ಕೊಟ್ಟರೂ, ನಮ್ಮದೇನೂ ತಕರಾರು ಇಲ್ಲ ಎಂದು ಹೇಳಿದ್ದಾರೆ. ಇವೆಲ್ಲದರ ನಡುವೆ, ಅಮಿತ್ ಶಾ, ಬೆಂಗಳೂರಿನಲ್ಲಿ ಇದ್ದಂತಹ ಸಂದರ್ಭದಲ್ಲೇ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಇನ್ನೊಂದು ಕ್ಯಾಂಪಿನ ನಾಯಕರನ್ನು ಭೇಟಿಯಾಗಿದ್ದಾರೆ. ದಾವಣಗೆರೆಯ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರನ್ನು ಅವರ ನಿವಾಸದಲ್ಲಿ ಸೋಮಣ್ಣ ಭೇಟಿಯಾಗಿದ್ದರು.
ಲಾಸ್ಟ್ ಲೈನ್: ರಾಜ್ಯದಲ್ಲಿ ವಿಜಯೇಂದ್ರ ಬಣ, ವಿಜಯೇಂದ್ರ ವಿರೋಧಿ ಬಣ, ತಟಸ್ಥ ಬಣ, ಈ ಮೂರು ಬಣದ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರು ಪಡೆದಿದ್ದಾರೆ. ಒಟ್ಟಾರೆಯಾಗಿ ರಾಜ್ಯ ನಾಯಕರ ಒಲವು ಯಾರ ಪರವಾಗಿದೆ ಎನ್ನುವುದನ್ನು ಅರಿಯುವ ಪ್ರಯತ್ನ ಇದಾಗಿದೆ, ಅಮಿತ್ ಶಾ ಈಗಾಗಲೇ ಒಂದು ಹೆಸರನ್ನು ಫೈನಲ್ ಮಾಡಾಗಿದೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಅದು, ವಿಜಯೇಂದ್ರ ಅವರೋ ಅಥವಾ ಅಚ್ಚರಿಯ ಆಯ್ಕೆಯೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.