ಬೆಂಗಳೂರು:- ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯು ಒಳಗೊಳಗೆ ಗೊಂದಲದ ಗೂಡಾಗಿದೆ. ಎಲ್ಲವೂ ಸರಿ ಇದೆ, ಮೈತ್ರಿ ಯಶಸ್ವಿಯಾಗಿದೆ ಎಂದು ಕೆಲವರು ಬಹಿರಂಗವಾಗಿ ಹೇಳುತ್ತಿದ್ದರೂ ಗೊಂದಲ, ಭಿನ್ನಾಭಿಪ್ರಾಯ ಹಾಗೂ ಅಂತರ ಎದ್ದು ಕಾಣುವಂತಿದೆ.
ಹೀಗಿರುವಾಗ ಮೈತ್ರಿ ಗಟ್ಟಿಗೊಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ನಾಯಕರಿಗಿಂತ ಹೈಕಮಾಂಡ್ ನಾಯಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದು ರಾಜ್ಯ ಕಮಲ ಪಡೆಯ ನಾಯಕರಿಗೆ ಇರುಸು-ಮುರುಸು ತಂದಿದೆ.
ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿರುವ ಗೊಂದಲದ ಬಗ್ಗೆ ಎಚ್‌ಡಿಕೆ ಮೌನ ವಹಿಸಿದ್ದರು, ಯಾವುದೇ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಆದರೆ, ದಿನಗಳ ಹಿಂದೆ ನಡೆದಿದ್ದ ಜೆಡಿಎಸ್ ಕಾರ್ಯಕ್ರಮದಲ್ಲಿ ಮೌನ ಮುರಿದಿದ್ದರು. ಚುನಾವಣಾ ಸಂದರ್ಭದಲ್ಲಿ ಕೇಂದ್ರದಿಂದ ಸೀಟ್ ತರುವುದು ನನ್ನ ಜವಾಬ್ದಾರಿ ಎನ್ನುವ ಮೂಲಕ ಕಾರ್ಯಕರ್ತರಿಗೆ ಹುಮಸ್ಸು ಕೊಟ್ಟು ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟಿದ್ದರು. ಇದು ಇದೀಗ ಕಮಲ ಪಡೆಯ ನಿದ್ದೆಗೆಡಿಸಿದೆ.
YES…ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಹೆಚ್ಚು ಸಂಸದ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಕೇಂದ್ರದಲ್ಲಿ ಮಂತ್ರಿಯಾಗುವ ಮೂಲಕ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ ಅನ್ನುವ ಸಂದೇಶ ರವಾನೆ ಮಾಡಿದ್ದರು.
ಆದರೆ, ಕಳೆದ ಕೆಲ ತಿಂಗಳ ಹಿಂದೆ ರಾಜ್ಯ ಬಿಜೆಪಿ ನಾಯಕರ ಜೊತೆ ಜೆಡಿಎಸ್ ಪಕ್ಷದ ಸಂಬಂಧ ಅಷ್ಟು ಸರಿ ಇಲ್ಲ ಅನ್ನೋದು ಹಲವು ಬಾರಿ ಬೆಳಕಿಗೆ ಬಂದಿದೆ. ಪ್ರತ್ಯೇಕ ಹೋರಾಟ ಮಾಡುವ ಮೂಲಕ ಬಿಜೆಪಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿತ್ತು. ಈ ಬಗ್ಗೆ ಕಮಲದ ನಾಯಕರು ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದರು. ಸಹಜವಾಗಿ ಬಿಜೆಪಿ ರಾಜ್ಯ ನಾಯಕರ ನಡೆ ಜೆಡಿಎಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕುಮಾರಸ್ವಾಮಿ ಮಾತ್ರ ಮೌನವಾಗಿದ್ದರು. ಬಹಿರಂಗ ಹೇಳಿಕೆ ಕೊಟ್ಟು ಮೈತ್ರಿ ಸಂಬಂಧ ಕೆಡಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ಆಡಿದ ಒಂದಷ್ಟು ಮಾತುಗಳು ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟ ಪರೋಕ್ಷ ಕೌಂಟರ್ ಸಾಕಷ್ಟು ಚರ್ಚೆಯಾಗುತ್ತಿವೆ.
ಕಳೆದ ಎರಡು ಮೂರು ದಿನಗಳ ಹಿಂದೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಜನರೊಂದಿಗೆ ಜನತಾದಳ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ತಮ ಭಾಷಣದಲ್ಲಿ ಜೆಡಿಎಸ್ ಮುಗಿದು ಹೋಗಿದೆ ಬನ್ನಿ ನಮ್ಮ ಜೊತೆ ಎಂದು ಸಿಎಂ ಹೇಳ್ತಾರಲ್ಲ, ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಇಂದು ಉತ್ತರ ಸಿಕ್ಕಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸ್ಥಳೀಯವಾಗಿ ಮೂರ್ನಾಲ್ಕು ಜನ ಮಾತಾಡೋದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಮೈತ್ರಿಯಲ್ಲಿ ಗೊಂದಲ ಇಲ್ಲ, ಸೀಟ್ ತರೋದು ನನ್ನ ಜವಾಬ್ದಾರಿ. ಕ್ಷೇತ್ರ ಗಟ್ಟಿ ಮಾಡಿಕೊಳ್ಳಿ, ನಾನ್ ಸೀಟ್ ತರುತ್ತೇನೆ ಎಂದಿದ್ದರು. ಈ ಮೂಲಕ ಎಲ್ಲವೂ ಕೇಂದ್ರ ಬಿಜೆಪಿ ನಿರ್ಧಾರ ಮಾಡಲಿದೆ ಎಂಬ ಸಂದೇಶ ರವಾನಿಸಿದ್ದರು.
ರಾಜ್ಯದಲ್ಲಿ ಮೈತ್ರಿ ಸೇರಿದಂತೆ ಎಲ್ಲವೂ ಕೇಂದ್ರದಲ್ಲಿ ನಿರ್ಧಾರವಾಗುತ್ತದೆ ಅನ್ನುವ ಕುಮಾರಸ್ವಾಮಿ ಮಾತುಗಳು ರಾಜ್ಯ ಬಿಜೆಪಿ ಕೆಲ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನೆ ಮಾಡಿದಂತಿದೆ. ಕುಮಾರಸ್ವಾಮಿಯ ಈ ಮಾತುಗಳಿಗೆ ಬಿಜೆಪಿ ಪಾಳೆಯದಲ್ಲಿ ಸಾಕಷ್ಟು ಚರ್ಚೆ ಜೋರಾಗಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಕೆಲ ನಾಯಕರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ಬಿಜೆಪಿ ಜೆಡಿಎಸ್ ಸಂಬಂಧ ಹಾಲು ಜೇನಿನಂತೆ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಬಿಜೆಪಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ. ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಯಾರಿಗೆ ಮಾತನಾಡಿದ್ದಾರೆ ಗೊತ್ತಿಲ್ಲ. ಅವರ ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಮೊನ್ನೆಯಷ್ಟೇ ಮಾಜಿ ಪ್ರಧಾನಿ ದೇವೇಗೌಡರ ಭೇಟಿಯಾಗಿ ಬಂದಿದ್ದೇನೆ ,ಅಷ್ಟೇ ಅಲ್ಲದೆ ನಿರಂತರವಾಗಿ ಕುಮಾರಸ್ವಾಮಿ ನಾವು ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.
ಇನ್ನುಸ್ಥಳೀಯ ಮಟ್ಟದಲ್ಲಿ ಕೆಲ ನಾಯಕರು ಒಂದಷ್ಟು ಹೇಳಿಕೆಗಳನ್ನು ನೀಡಿರಬಹುದು, ಆದರೆ ನಮ ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ಮುಂದೆ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರವೇ ಅಧಿಕಾರಕ್ಕೆ ಬರೋದು ಎಂದು ತಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಸರ್ಕಾರ ಬರುತ್ತದೆ, ಲೋಕಲ್ ಮೂರ್ನಾಲ್ಕು ಜನರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸುನಿಲ್ ಕುಮಾರ್ ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ನಮ ಸಂಸದೀಯ ಸಮಿತಿ ಇದೆ, ಎಲ್ಲವೂ ಅವರು ತೀರ್ಮಾನ ಮಾಡುತ್ತಾರೆ. ಈಗ ಯಾವುದೂ ಚರ್ಚೆ ಬೇಕಾಗಿಲ್ಲ ಅನ್ನುವ ಮೂಲಕ ಸುನಿಲ್ ಪರೋಕ್ಷವಾಗಿ ಸದ್ಯಕ್ಕೆ ಕುಮಾರಸ್ವಾಮಿ ಮಾತುಗಳು ಅಪ್ರಸ್ತುತ ಎಂದಿದ್ದಾರೆ.