ಬೆಂಗಳೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕ್ಕೆ ಕನ್ನಡಿಗನ ಹೆಸರು ಪ್ರಸ್ತಾಪ.!?

ಬೆಂಗಳೂರು:- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕ್ಕೆ ಕರ್ನಾಟಕದ ಒಬ್ಬ ಹಿರಿಯ ರಾಜಕಾರಣಿಯ ಹೆಸರು ಕೇಳಿ ಬಂದಿದೆ. ಕಳೆದ ನಾಲ್ಕು ತಿಂಗಳಿನಿಂದ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆಯುತ್ತಿದ್ದು, ಇನ್ನೂ ನೂತನ ಅಧ್ಯಕ್ಷ ಯಾರ ಎಂಬ ಬಗ್ಗೆ ಇನ್ನೂ ಫೈನಲ್‌ ಆಗಿಲ್ಲ. ಆದರೆ, ಇದೀಗ ಅಧ್ಯಕ್ಷರ ಆಯ್ಕೆಗೆ ಸಮಯ ಕೂಡಿ ಬಂದಿದೆ. ಜುಲೈ ಮೊದಲ ವಾರದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಾರ ಎಂಬ ಬಗ್ಗೆ ರಿವೀಲ್‌ ಆಗುವ ಸಾಧ್ಯತೆ ಇದ್ದು, ಅತೀ ಶೀಘ್ರದಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂದು ತಿಳಿಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹಲವು ಹೆಸರುಗಳು ಚರ್ಚೆಯಲ್ಲಿದ್ದು, ಈ ಹೆಸರುಗಳ ಫೈಕಿ ಕನ್ನಡಿಗನ ಹೆಸರು ಕೇಳಿ ಬರುತ್ತಿದೆ. ಕರ್ನಾಟಕದ ನಾಯಕನಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಕಟ್ಟಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರು ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಯಾರು ಆ ಕನ್ನಡಿಗ ಎಂಬ ಪ್ರಶ್ನೆ ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ.

ಸದ್ಯ ಬಿಜೆಪಿ ಪಾಳಯದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾಗೆ ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ನಾಲ್ಕೈದು ತಿಂಗಳಿನಿಂದಲೂ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ. ಇತ್ತ ರಾಷ್ಟ್ರೀಯ ಅಧ್ಯಕ್ಷರ ರೇಸ್‌ನಲ್ಲಿ ಸಾಕಷ್ಟು ಪ್ರಭಾವಿ ನಾಯಕರ ಹೆಸರು ಕೇಳಿ ಬಂದಿದೆ. ಈ ರಾಷ್ಟ್ರೀಯ ಅಧ್ಯಕ್ಷ ಪಟ್ಟಕ್ಕೆ ಯಾರು ಸೂಕ್ತ ಎಂಬ ಲೆಕ್ಕಾಚಾರವನ್ನ ಆರ್‌ಎಸ್‌ಎಸ್‌ ಸಹ ನಡೆಸಿದೆ ಎಂದು ತಿಳಿದು ಬಂದಿದೆ. ಸದ್ಯ ಬಿಜೆಪಿ ಯಾರಿಗೆ ಪಟ್ಟ ಕಟ್ಟಬೇಕು ಅನ್ನೋ ಗೊಂದಲದಲ್ಲಿದೆ. ಈ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಆರ್‌ಎಸ್‌ಎಸ್‌ ಪಾತ್ರವೂ ನಿರ್ಣಾಯಕ ಆಗಿರುತ್ತೆ, ಆರ್‌ಎಸ್‌ಎಸ್‌ನ ಸಲಹೆ ಮತ್ತು ಸಮ್ಮತಿಯನ್ನು ಪಡೆಯಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ 11 ಮಂದಿ ಆಕಾಂಕ್ಷಿಗಳ ಪಟ್ಟಿ ಸಿದ್ದವಾಗಿದೆ. ಅದರಲ್ಲಿ ಕನ್ನಡಿಗನ ಹೆಸರು ಪ್ರಬಲವಾಗಿ ಕೇಳಿ ಬರ್ತಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ಜೊತೆಗೆ ಉತ್ತಮ ಒಡನಾಟ ಹೊಂದಿರುವ, ಆರ್‌ಎಸ್‌ಎಸ್‌ ಬ್ಯಾಗ್ರೌಂಡ್‌ನಿಂದ ಬಂದಂಥಹ ಕನ್ನಡಿಗರಾದ ಪ್ರಹ್ಲಾದ್‌ ಜೋಶಿಯವರ ಹೆಸರು ಪ್ರಬಲವಾಗಿ ಕೇಳಿ ಬರ್ತಿದ್ದು, ಕನ್ನಡಿಗ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರಾಗುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಜುಲೈ 7 ರಂದು ಹೆಸರು ಘೋಷಣೆಯಾಗಲಿದೆ ಎನ್ನಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರು, ಸಂಘ ಪರಿವಾರದಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಗೆ ಬಹಳ ಹತ್ತಿರವಾಗಿದ್ದಾರೆ. ಆರ್‌ಎಸ್‌ಎಸ್‌ ಅಂತ ಬಂದಾಗ ಎಲ್ಲಿಯೂ ಕೂಡ ರಾಜಿಯಾಗದ ವ್ಯಕ್ತಿತ್ವ, ಪಕ್ಷದ ಸಿದ್ದಾಂತಕ್ಕೆ ಬದ್ಧವಾಗಿದ್ದಾರೆ. ಇನ್ನೂ ಆರಂಭದಿಂದಲೂ ಜೋಶಿ ಅವರು ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್‌ ಮನಸ್ಸಿನಲ್ಲಿ ಜೋಶಿಯವರ ಹೆಸರು ಇದೆ. ಹೀಗಾಗಿ ಪ್ರಹ್ಲಾದ್‌ ಜೋಶಿ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಪಟ್ಟ ಒಲಿದು ಬರಲಿದೆಯಾ ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಸಂಭಾವ್ಯ ನಾಯಕರ ಪಟ್ಟಿಯ ಮೊದಲನೇಯ ಹೆಸರಿನಲ್ಲಿ ಧರ್ಮೇಂದ್ರ ಪ್ರಧಾನ್, ನಂತರದಲ್ಲಿ ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ಅರ್ಜುನ್ ರಾಮ್ ಮೇಘವಾಲ್, ಪ್ರಲ್ಹಾದ್ ಜೋಶಿಯವರ ಹೆಸರು ಹರಿದಾಡುತ್ತಿದೆ.