ಬೆಂಗಳೂರು:- ಪರಿಶಿಷ್ಟ ಜಾತಿ ಸಮೀಕ್ಷೆ ಖಾತರಿ ಪಡಿಸಿಕೊಳ್ಳುವ ಸಲುವಾಗಿ ನಾಳೆಯಿಂದ ಪ್ರತಿ ಮನೆಗೆ ಸ್ಟಿಕ್ಕರ್ ಅಳವಡಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಇದರೊಂದಿಗೆ ಪರಿಶಿಷ್ಟ ಜಾತಿ ಸಮೀಕ್ಷಾ ಅವಧಿಯನ್ನು 30ನೇ ಜೂನ್ 2025 ರವರೆಗೆ ವಿಸ್ತರಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಕುರಿತು ಖಾತರಿ ಪಡಿಸಿಕೊಳ್ಳುವ ಸಲುವಾಗಿ ನಾಳೆಯಿಂದ (23ನೇ ಜೂನ್ 2025 ರಿಂದ) ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲು ಬಿಬಿಎಂಪಿಯ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು(EMPERICAL DATA) ಸಂಗ್ರಹಿಸಲು, 05-05-2025 ರಿಂದ ಮನೆ-ಮನೆ ಭೇಟಿ ನೀಡುವ ಮೂಲಕ ರಾಜ್ಯಾದ್ಯಂತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿರುತ್ತದೆ.
ಕರ್ನಾಟಕ ಸರ್ಕಾರವು ಪ್ರತಿಯೊಬ್ಬರಿಗೂ, ವಿಶೇಷವಾಗಿ ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ವಹಿಸಲಾಗಿದೆ. ಅದರಂತೆ, ಕರ್ನಾಟಕದ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ ಪಾಲಿಕೆಯ ತಂಡ ಅಥವಾ ಗಣತಿದಾರರು ಜೂನ್ 23, 2025 ರಿಂದ ನಿಮ್ಮ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ನಡೆಸುತ್ತಾರೆ. ಬಿಬಿಎಂಪಿ ತಂಡ ಅಥವಾ ಗಣತಿದಾರರು ಮನೆಗೆ ಭೇಟಿ ಮಾಡಿರುವ ಪುರಾವೆಯಾಗಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸುತ್ತಾರೆ. ದಯವಿಟ್ಟು, ನಿಮ್ಮ ಮನೆಗೆ ಭೇಟಿ ನೀಡುವ ಬಿಬಿಎಂಪಿ ತಂಡ ಅಥವಾ ಗಣತಿದಾರರಿಗೆ ಸಹಕರಿಸಿ ಮತ್ತು ಸರಿಯಾದ ಮಾಹಿತಿ ನೀಡಿ. ಅಲ್ಲದೆ, ನಿಮ್ಮ ಮನೆಗೆ ಅಂಟಿಸಿದ ಸ್ಟಿಕ್ಕರ್ ಅನ್ನು ತೆಗೆದು ಹಾಕಬೇಡಿ ಎಂದು ಬಿಬಿಎಂಪಿ ಮನವಿ ಮಾಡಿದೆ.
ಸಮೀಕ್ಷಾ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಸಮೀಕ್ಷೆಯಲ್ಲಿ ಇದುವರೆಗೂ ಭಾಗವಹಿಸದೇ ಇರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರಿಗೆ, 22ನೇ ಜೂನ್ 2025 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ/ವಿಧಾನದ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.