ದೆಹಲಿ:- ಕಳೆದ ಕೆಲ ದಶಕಗಳಲ್ಲಿ ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ದೂರಿನ ಸಂಬಂಧ ತಕ್ಷಣ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸುವುದು ಸದ್ಯದ ತುರ್ತು ಎಂದು ಸುಪ್ರೀಂ ಕೋರ್ಟ್ ವಕೀಲ ಎ ವೇಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾನು ದೂರುದಾರರನ್ನು ಪ್ರತಿನಿಧಿಸುತ್ತಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಮಾಧ್ಯಮ ಮತ್ತು ಜನರಿಗೆ ಇಂಥ ಅತ್ಯಂತ ವಿಶೇಷ ಸಂದರ್ಭದಲ್ಲಿ ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಸುವ ಉದ್ದೇಶದಿಂದ ಈ ವಿವರಣೆ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ಹಲವು ವರ್ಷಗಳಿಂದ ಕೊಲೆಯಾದ ನೂರಾರು ಶವಗಳನ್ನು ಹೂಳುವಂತೆ ಬಲವಂತ ಮಾಡಲಾಗಿತ್ತು. ಈಗ ಆ ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ನಾನು ತೋರಿಸಬಲ್ಲೆ ಎಂದು ಹೇಳಿದರೆ ಇಂಥ ಸಂದರ್ಭದಲ್ಲಿ ಪೊಲೀಸರು ಏನು ಮಾಡಬೇಕು ಎಂದರೆ ತಕ್ಷಣ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಮಾಜದ ಬಡಜನರನ್ನು ವ್ಯವಸ್ಥಿತವಾಗಿ ಕೊಲೆಗೈದಿರುವುದು, ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು, ದಶಕಗಳ ಕಾಲ ಸಂಘಟಿತವಾಗಿ ಅಪರಾಧ ಕೃತ್ಯ ಬಚ್ಚಿಟ್ಟಿರುವ ಆರೋಪ ಸೇರಿದೆ. ಇಂಥ ಬ್ರಹ್ಮಾಂಡ ಅಪರಾಧ ಎದುರಾಗಿರುವಾಗ ಕಾನೂನಿನ ಚೌಕಟ್ಟಿನಲ್ಲಿ ತಕ್ಷಣ ಮತ್ತು ನಿರ್ಣಾಯಕ ಕ್ರಮ ಅಗತ್ಯವಾಗಿದೆ ಎಂದು ವೇಲನ್ ಹೇಳಿದ್ದಾರೆ.
ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಸವಾಲುಗಳ ನಡುವೆಯೂ ಅತ್ಯಂತ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸಲು ಅಗತ್ಯವಾದ ವಿಧಾನಗಳು ಮತ್ತು ಚೌಕಟ್ಟುಗಳಿವೆ. ತಡ ಮಾಡದೇ ಹೂಳಲಾದ ಶವಗಳ ಅಸ್ತಿ ಪಳೆಯುಳಿಕೆಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡಬೇಕಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಲು ಪೊಲೀಸರು ಕಾಯಬಾರದು. ನ್ಯಾಯದಾನ ವಿಳಂಬಗೊಳಿಸುವುದು ನ್ಯಾಯ ನಿರಾಕರಿಸಿದಂತಾಗುತ್ತದೆ. ಹಾಲಿ ಪ್ರಕರಣದಲ್ಲಿ ವಶಕ್ಕೆ ಪಡೆಯುವ ಪ್ರತಿಯೊಂದು ಪಳೆಯುಳಿಕೆಯೂ ಸಂತ್ರಸ್ತರ ಕುಟುಂಬಸ್ಥರಿಗೆ ನ್ಯಾಯ ದೊರಕಿಸುವ ಅವಕಾಶವಾಗಿದ್ದು, ಪ್ರತಿಯೊಂದು ದಿನವೂ ಮುಖ್ಯವಾಗಿದೆ ಎಂದು ವಿಶ್ಲೇಷಿಸಿದ್ದಾರೆ.