ಹಾಸನ:- ಮೊಬೈಲ್ ಕದ್ದ ಆರೋಪದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬನು ಯುವಕನಿಗೆ ಮನಸೋ ಇಚ್ಛೆ ಲಾಠಿಯಿಂದ ಹೊಡೆದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬ ಆಸ್ಪತ್ರೆಗೆ ಬಂದಿದ್ದ. ಈ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಮೊಬೈಲ್ ಕದ್ದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಯುವಕನನ್ನು ಹಿಡಿದು ಸೆಕ್ಯೂರಿಟಿಗಾರ್ಡ್ ಗಳು ಮನಬಂದಂತೆ ಹೊಡೆದಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ, ಪೊಲೀಸರ ಎದುರಲ್ಲೇ ಸೆಕ್ಯೂರಿಟಿ ಗಾರ್ಡ್ ಓರ್ವ ಯುವಕನ ಕೈ-ಕಾಲುಗಳ ಮೇಲೆ ಲಾಠಿಯಿಂದ ಮನಸ್ಸೋ ಇಚ್ಛೆ ಭಾರಿಸಿದ್ದಾನೆ. ಯುವಕ ತಾನು ಮೊಬೈಲ್ ಕದ್ದಿಲ್ಲ, ನನ್ನನ್ನು ಬಿಟ್ಟುಬಿಡಿ ಹೊಡೆಯಬೇಡ ಎಂದು ಕಾಲಿಗೆ ಬಿದ್ದು ಕೈಮುಗಿದು ಕೇಳಿದರೂ ಬಿಟ್ಟಿಲ್ಲ. ಭದ್ರತಾ ಸಿಬ್ಬಂದಿ ಕ್ರೌರ್ಯವಾಗಿ ನಡೆದುಕೊಂಡಿದ್ದಾನೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.
ಸೆಕ್ಯೂರಿಟಿ ಗಾರ್ಡ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಒಂದು ವೇಳೆ ಯುವಕ ಮೊಬೈಲ್ ಕದ್ದಿದ್ದರೂ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕಿತ್ತು, ಇಲ್ಲವೇ ಕಾನೂನು ಪ್ರಕಾರ ವಿಚಾರಿಸಬೇಕಿತ್ತು. ಅದನ್ನು ಬಿಟ್ಟು ಸೆಕ್ಯೂರಿಟಿ ಗಾರ್ಡ್ ಯುವಕ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದರೂ, ಬಿಡದೇ ಮನುಷತ್ವವಿಲ್ಲದವರಂತೆ ಹೊಡೆದು ಚಿತ್ರಹಿಂಸೆ ನೀಡಿದ್ದು ಸರಿಯಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಜೊತೆಗೆ ಪೊಲೀಸ್ ಪೇದೆಗೆ ಕರ್ತವ್ಯದಿಂದ ಅಮಾನತು ಮಾಡಬೇಕು ಎಂಬ ಮಾತು ಕೂಡ ಕೇಳಿ ಬರುತ್ತಿದೆ.