ಮಂಗಳೂರು:- ಕರಾವಳಿಯ ತೀರದಲ್ಲಿ ಸಮುದ್ರದ ನೀರು ಮತ್ತೆ ಕೆಂಪಾಗಿಸಿದೆ. ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ. ಸುಹಾಸ್ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆಗಮಿಸಿದ್ದರು.
ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿದ್ದು, ‘ಈ ಘಟನೆ ರಾತ್ರಿ 8.27 ರ ಸುಮಾರಿಗೆ ನಡೆದಿದೆ. ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ ಕೆಎ-12-ಎಂಬಿ-3731 ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಹಾಶ್ ಶೆಟ್ಟಿ ಅವರನ್ನು ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿದೆ. 5 ರಿಂದ 6 ಜನರಿದ್ದ ದುಷ್ಕರ್ಮಿಗಳು ಸುಹಾಶ್ ಶೆಟ್ಟಿ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನುಂಟುಮಾಡಿದ್ದಾರೆ. ಅವರನ್ನು ತಕ್ಷಣ ಎಜೆ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದರು.
ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಮೇಲೆ ಪ್ರಕರಣಗಳಿವೆ, ಅವುಗಳ ಪೈಕಿ ಮಂಗಳೂರು ನಗರದಲ್ಲಿಯೇ 4 ಪ್ರಕರಣಗಳು ದಾಖಲಾಗಿವೆ.
ರೌಡಿ ಶೀಟರ್ ಸುಹಾನ್ ಪ್ರಕರಣ:
2022ರಲ್ಲಿ ಸುರತ್ಕಲ್ ಠಾಣೆಯಲ್ಲಿ ಐಪಿಸಿ 143, 147, 148, 326, 302, 504, 506, 120(B) 201, 202, 204, 212, 118, 149ರಡಿ ದಾಖಲಾದ ಫಾಝಿಲ್ ಕೊಲೆ ಪ್ರಕರಣವು ವಿಚಾರಣಾ ಹಂತದಲ್ಲಿದೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ ಸೆಕ್ಷನ್ 143, 47, 323, 447, 504, 506, 149ರ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ 160ರಡಿ ದಾಖಲಾದ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506ರಡಿ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506, 307, 302, 149ರಡಿ ಮತ್ತು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣವು ಈಗಾಗಲೇ ವಿಚಾರಣಾ ಹಂತದಲ್ಲಿದೆ.