ಮಂಗಳೂರು:- ಕಳೆದ ಕೆಲವು ದಿನಗಳಿಂದ ಮಂಗಳೂರು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗಲಾಟೆಯೂ ಜೋರಾಗಿತ್ತು.
ಬಂಟ್ವಾಳದ ರಹಿಮಾನ್ ಕೊಲೆ ಕೇಸ್ ನಿಂದಾಗಿ ಮಂಗಳೂರಿನ ಅಲ್ಪಸಂಖ್ಯಾತರಲ್ಲಿ ರಕ್ಷಣೆಯ ಕೂಗು ಜೋರಾಗಿ ಕೇಳುತ್ತಿದೆ.
ಕೊಲೆಯಾದ ಬೆನ್ನಲ್ಲೇ ಮುಸ್ಲಿಂ ಮುಖಂಡರು ಸಭೆ ಇಂದು ನಡೆಸಿದ್ದು, ಸಭೆಯಲ್ಲಿ ಜೋರು ಗಲಾಟೆಯಾಗಿ ಅಸಮಾಧಾನದ ಜ್ವಾಲೆ ಹೊರ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರೆಲ್ಲ ಸೇರಿ ಇಂದು ಶಾದಿ ಮಹಲ್ ನಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಸಭೆಯನ್ನ ಮುಂದೂಡುವ ವಿಚಾರಕ್ಕೆ ಗಲಾಟೆಗಳು ನಡೆದಿವೆ ಎನ್ನಲಾಗಿದೆ.
ಈ ಸಭೆಯೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ನೇತೃತ್ವದಲ್ಲಿ ನಡೆಯುತ್ತಿತ್ತು. ಇದೇ ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕೆಂಬ ಚರ್ಚೆಗಳು ನಡೆಯುತ್ತಿತ್ತು. ಆದರೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ರಾಜೀನಾಮೆಗೆ ಒಪ್ಪಿಲ್ಲ, ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಭೆಯನ್ನ ಮುಂದೂಡಲಾಗುವುದು ಎಂಬ ಮಾಹಿತಿ ದೊರಕುತ್ತಿದ್ದಂತೆ ಸಭೆಯಲ್ಲಿದ್ದ ಸದಸ್ಯರು ವಿರೋಧಿಸಿದ್ದರಿಂದ ಸಭೆಯಲ್ಲಿ ಗದ್ದಲ ಉಂಟಾಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಜೋರಾಗಿ ಗಲಾಟೆಯೇ ಶುರುವಾಗಿತ್ತು. ಈ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆ ರಣಾರಂಗವಾಗಿದೆ.
ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಉಳ್ಳಾಲ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರು ಕೂಡ ಅಸಮಾಧಾನದಿಂದ ರಾಜೀನಾಮೆ ಸಲ್ಲಿಸಿದ್ದರು.
ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಮುಸ್ಲಿಂ ಮುಖಂಡರು ಒಂದು ನಿರ್ಧಾರಕ್ಕೆ ಬಂದು ಒಬ್ಬಬ್ಬರಾಗಿಯೇ ರಾಜೀನಾಮೆ ಘೋಷಣೆ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಶಾಹುಲ್ ಹಮೀದ್, ಸುಹೈಲ್ ಕಂದಕ್ ಸೇರಿದಂತೆ ಒಬ್ಬೊಬ್ಬರಾಗಿಯೇ ಸಾಮೂಹಿಕ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.
ಬಂಟ್ವಾಳದ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ
27ರಂದು ಟೆಂಪೋ ಚಾಲಕ ಅಬ್ದುಲ್ ರಹೀಂ ಹತ್ಯೆ ನಡೆದಿತ್ತು. ನಿಸಾರ್ ಎಂಬುವವರು ನೀಡಿದ ಹೇಳಿಕೆಯ ಮೇಲೆ ಈಗಾಗಲೇ 15 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಕೇಸ್ ಗೆ ಸಂಬಂಧಿಸಿದಂತೆ ಐದು ತಂಡಗಳು ತನಿಖೆ ನಡೆಸುತ್ತಿವೆ.