ದೆಹಲಿ:- ರೈತರ ಪ್ರತಿಭಟನೆ ಕುರಿತು ಮಾತನಾಡಲು ನಟ ಪ್ರಕಾಶ್ ರೈ ದೆಹಲಿಯ ಕೃಷಿ ಸ್ಥಾಯಿ ಸಮಿತಿ ಸಭೆಗೆ ಹೋಗಿದ್ದರು. ಆದರೆ, ಪ್ರಕಾಶ್ ರೈ ಬಂದರೆಂದು ಸಮಿತಿಯ ಸದಸ್ಯರು ಸಭೆಯನ್ನೇ ರದ್ದು ಮಾಡಿದ ಘಟನೆಯೊಂದು ನಡೆದಿದೆ.
ಕೇಂದ್ರ ಕೃಷಿ ಸ್ಥಾಯಿ ಸಮಿತಿ ಇಂದು (ಜುಲೈ 1) ಸಭೆ ಕರೆದಿತ್ತು, ರೈತ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸಭೆಗೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಮೇಧಾ ಪಾಟ್ಕರ್ ಅವರ ಜೊತೆಗೆ ನಟ ಪ್ರಕಾಶ್ ರೈ ಅವರು ಸಭೆಯಲ್ಲಿ ಭಾಗವಹಿಸಲು ಸಂಸತ್ ಭವನಕ್ಕೆ ತೆರಳಿದ್ದರು. ಆದರೆ, ಪ್ರಕಾಶ್ ರೈ ಬಂದಿದ್ದನ್ನು ಖಂಡಿಸಿ ಸಮಿತಿ ಸದಸ್ಯರು ಸಭೆಯನ್ನೇ ರದ್ದು ಮಾಡಿದ್ದಾರೆ. ಈ ಬಗ್ಗೆ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಪ್ರಕಾಶ್ ರೈ, ಇಂದು ಕೃಷಿ ಸ್ಥಾಯಿ ಸಮಿತಿ ಸಭೆ ಇತ್ತು, ಕೃಷಿ ಬಗ್ಗೆ ಚರ್ಚೆ ಮಾಡಿರುವ ಸಮಿತಿ ಇದು. ದೇವನಹಳ್ಳಿ ಬಳಿಯ ಚೆನ್ನರಾಯಪಟ್ಟಣದ ಭೂ ಸ್ವಾಧೀನ ಸಮಸ್ಯೆ ಬಗ್ಗೆ ಮಾತಾಡಲು ಮೇದಾ ಪಾಟ್ಕರ್ ನಾವು ಬಂದಿದ್ದಿವಿ. ನಾವು ಒಳಗೆ ಹೋದೆವು, ನಮ್ಮನ್ನ ಕೂರಿಸಿದರು. ದೇವನಹಳ್ಳಿ ಬಳಿಯ ರೈತರ ಸಮಸ್ಯೆ ಬಗ್ಗೆ ಮಾತನಾಡುವ ಉದ್ದೇಶ ಹೊಂದಿದ್ದೆ. ಆದರೆ, ಬಿಜೆಪಿ ಪಕ್ಷದ ಸಂಸದರು ಹೊರಗೆ ಹೋಗ್ತಿದ್ದರು. ಅವರವರೇ ವಾಗ್ವಾದ ಮಾಡಿಕೊಳ್ತಿದ್ದರು. ಬಿಜೆಪಿ ಸಂಸದರು ಸಭೆ ರದ್ದು ಮಾಡಿದಿವಿ ಅಂದರು. ಯಾಕೆ ರದ್ದು ಮಾಡಿದರು ಅಂತಾ ಕೇಳಿದ್ವಿ, ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ ಪ್ರಕಾಶ್ ರೈ.
ಇದು ಜನರ ಸಮಸ್ಯೆ ಆಗಿತ್ತು. ಮೆಧಾ ಪಾಟ್ಕರ್ ರನ್ನ ಕರೆದಿದ್ದರು. ಅವರೊಟ್ಟಿಗೆ ನಾನು ಹೋಗಿದ್ದೆ. ಆದರೆ, ದಿಢೀರ್ ಹೀಗೆ ಆಯ್ತು. ನಾವೇನು ಟೆರರಿಸ್ಟಾ, ಬಾಂಬ್ ಹಾಕಲು ಬಂದಿದ್ವಾ. ಪ್ರಶ್ನೆ ಮಾಡೊದೆ ಬೇಡವಾ? ಕೇಳಿಸಿಕೊಳ್ಳೊದು ಬೇಡವಾ? ನನ್ನ ಹಾಗೂ ಮೇದಾ ಪಾಟ್ಕರ್ ನ ಬಿಡಿ ಉಳಿದವರ ಸಮಸ್ಯೆಗಳನ್ನಾದರೂ ಕೇಳಬೇಕಲ್ವಾ? ಸರ್ಕಾರ ಯಾವುದೇ ಆಗಲಿ, ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಮಾತಾಡಲು ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಲಾಗಿದೆ. ಹೈಕಮಾಂಡ್ ಭೇಟಿ ಮಾಡಿ ಸರ್ಕಾರಕ್ಕೆ ನಿರ್ದೇಶನ ನೀಡಿ ಅಂತಾ ಮನವಿ ಮಾಡಲಾಗುತ್ತದೆ. ಇಲ್ಲಾಂದರೆ ನಾಳೆಯಿಂದ ನಾವು ಕೂಡ ಪ್ರತಿಭಟನೆ ಕುರುತ್ತೇವೆ ಎಂದು ರೈತರು ಹೇಳಿದ್ದಾರೆ. ಇದು ನಮ್ಮ ಹೊರಾಟ ಅಲ್ಲ, ರೈತರ ಸಮಸ್ಯೆ ಎಂದಿದ್ದಾರೆ ರೈರವರು.
ಇಂದು ಸಭೆಯಲ್ಲಿ ದೇವೆಗೌಡರು ಕೂಡ ಇದ್ದರು ಅವರನ್ನ ಕೇಳಿದೆ, ಏನಣ್ಣಾ ಇದು ಅಂತಾ, ನೀವಾದರೂ ಹೇಳಿ ಅಂದೆ. ಮಣ್ಣಿನ ಮಗ ಅವರು ಅಂತಾರೆ, ಆದರೆ, ಸುಮ್ಮನೆ ಕೂತಿದ್ದರು. ನಾವು ಯಾರನ್ನ ನಂಬೋದು. ಭೂ ಕಾಯ್ದೆ ಬಗ್ಗೆ ಮಾತಾಡಲು ಕರೆದಿದ್ದರು. ಜನರ ಸಮಸ್ಯೆ ಕೇಳಲು ಕಮಿಟಿ ಮಾಡಿ ಈಗ ಸಮಸ್ಯೆಯನ್ನೇ ಕೇಳಿಸಿಕೊಳ್ಳದೆ ಎದ್ದು ಹೋಗ್ತಾರೆ ಅಂದರೆ ಏನ್ ನಡೆತಿದೆ? ಅವರೆ ಆಹ್ವಾನ ಮಾಡಿದ್ದರು, ಆಹ್ವಾನ ಇದ್ದ ಕಾರಣ ಬಂದಿದ್ದೆವು. ನಾವು ಪಾಸ್ ಇಲ್ಲದೆ ಒಳಗೆ ಆಗಲಿಕೆ ಆಗಲ್ಲಾ. ನಾವು ಬೇರೆ ದೇಶದವರೇ?’ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದರು.
ಗೆಲ್ಲುವರೆಗೂ ಪಕ್ಷ. ಗೆದ್ದ ಮೇಲೆ ಅದು ಸರ್ಕಾರ. ಇವತ್ತು ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಶ್ನೆ ಕೇಳಲು ಬಂದಿದ್ದೇವೆ. ರಾಹುಲ್ ಗಾಂಧಿನಾ ಸಹ ಪ್ರಶ್ನೆ ಕೇಳ್ತಿನಿ. ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ. ದೇವನಹಳ್ಳಿ ಅಹವಾಲು ತೆಗೆದುಕೊಂಡು ಹೋಗಬೇಕು. ಇದು ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. 13 ಹಳ್ಳಿಯ ರೈತರ ಹೋರಾಟ ಇದು. ಕಲಾವಿದರು, ಸಾಹಿತಿಗಳು ಹೋರಾಟ ಮಾಡ್ತಿದಿವಿ. ರೈತರಿಗೆ ಅನ್ಯಾಯ ಆಗಬಾರದು. ಅವರಿಗೆ ಬೆಂಬಲ ನೀಡಬೇಕು. ಸರ್ಕಾರ ಸ್ಪಂದಿಸೋವರೆಗೂ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ದೇವನಹಳ್ಳಿ ಬಳಿಕ ಚೆನ್ನರಾಯಪಟ್ಟಣ ಹೋಬಳಿಗೆ ಸೇರಿದ 13 ಗ್ರಾಮಗಳ 1777 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಭೂ ಸ್ವಾಧೀನ ವಿರೋಧಿಸಿ ಆ ಭಾಗದ ರೈತರು ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ದೇವನಹಳ್ಳಿ ಬಂದ್ ಸಹ ನಡೆಸಲಾಗಿದ್ದು, ಆ ದಿನ ನಡೆದ ಪ್ರತಿಭಟನೆಯಲ್ಲಿ ಪ್ರಕಾಶ್ ರೈ ಸಹ ಭಾಗಿ ಆಗಿದ್ದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಹ ಸಲ್ಲಿಸಲಾಗಿತ್ತು. ಇದೀಗ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಲು ಪ್ರಕಾಶ್ ರೈ ತೆರಳಿದ್ದಾಗ ಈ ಘಟನೆ ನಡೆದಿದೆ.