ಚಿಕ್ಕಮಗಳೂರು

ಮನೆ ಮದ್ದು: ವೀಳ್ಯದೆಲೆಯ ಉಪಯೋಗ

ಚಿಕ್ಕಮಗಳೂರು:- ವೀಳ್ಯದೆಲೆ ಎಂದರೆ ಬಲು ಶ್ರೇಷ್ಠ, ಶುಭ ಕಾರ್ಯಗಳಿಗೆ ವೀಳ್ಯದಿಂದ ಆರಂಭವಾಗುತ್ತದೆ.

ಈ ಎಲೆಯಿಂದ ಪ್ರಯೋಜನ ಬಹಳಷ್ಟಿದೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದ ಎಲೆಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ವಾಯು, ಅಜೀರ್ಣ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ಆರೋಗ್ಯ ತಜ್ಞರು ಹೇಳುತ್ತಾರೆ. ಕೆಮ್ಮು ಮತ್ತು ಶೀತಗಳಿಗೂ ವೀಳ್ಯದ ಎಲೆಗಳು ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ವೀಳ್ಯದ ಎಲೆಗಳ ಕಷಾಯವು ಆರೋಗ್ಯಕ್ಕೂ ಒಳ್ಳೆಯದು.

ವೀಳ್ಯದೆಲೆ ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿವೆ, ಅವು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತವೆ. ಅವು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ನೀವು ಪಾನ್ ತಿನ್ನುತ್ತಿದ್ದರೆ, ಸುಣ್ಣದ ಬದಲಿಗೆ ಗುಲ್ಕನ್, ಸೋಂಪು ಮತ್ತು ಒಣ ಹಣ್ಣುಗಳನ್ನ ಬಳಸುವುದು ಉತ್ತಮ. ಸುಣ್ಣವು ಆರೋಗ್ಯಕ್ಕೆ ಹಾನಿಕಾರಕ.

ಊಟದ ನಂತರ ಪ್ರತಿದಿನ ಕೆಲವು ವೀಳ್ಯದ ಎಲೆಗಳನ್ನ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ವೀಳ್ಯದ ಎಲೆಯ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಸ್ವತಂತ್ರ ರಾಡಿಕಲ್‌’ಗಳ ಪರಿಣಾಮ ಕಡಿಮೆಯಾಗುತ್ತದೆ. ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

ಇದು ಬಾಯಿ ದುರ್ವಾಸನೆಯನ್ನ ನಿವಾರಿಸುತ್ತದೆ ಅಲ್ಲದೆ ಒಸಡುಗಳಿಂದ ರಕ್ತಸ್ರಾವವನ್ನ ಕಡಿಮೆ ಮಾಡುತ್ತದೆ. ಅಲರ್ಜಿ ಮತ್ತು ಚರ್ಮದ ಮೇಲಿನ ತುರಿಕೆ ಮುಂತಾದ ಸಮಸ್ಯೆಗಳನ್ನ ನಿವಾರಿಸುತ್ತದೆ. ವೀಳ್ಯದ ಎಲೆಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಒಂದು ಬಟ್ಟಲು ನೀರಿನಲ್ಲಿ ವೀಳ್ಯದ ಎಲೆಗಳನ್ನು ಕುದಿಸಿ. ನಂತರ, ಈ ನೀರನ್ನು ಪ್ರತಿದಿನ ಕುಡಿಯುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಇದು ಮನೆ ಮದ್ದಿನ ಪ್ರಯೋಜನಗಳು.

ವೈದ್ಯಕೀಯ ತಜ್ಞರ ಪ್ರಕಾರ, ಒಬ್ಬರು ದಿನಕ್ಕೆ ಎರಡು ಅಥವಾ ಮೂರು ವೀಳ್ಯದ ಎಲೆಗಳಿಗಿಂತ ಹೆಚ್ಚು ತಿನ್ನಬಾರದು. ಅಲ್ಲದೆ, ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ಹಳೆಯ ವೀಳ್ಯದ ಎಲೆಗಳಲ್ಲಿ ಬೆಳೆಯುತ್ತವೆ. ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಅದಕ್ಕಾಗಿಯೇ ಹಳೆಯ ವೀಳ್ಯದ ಎಲೆಗಳನ್ನು ತಿನ್ನಬಾರದು. ಇದು ದೇಹಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.