ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು, ಭದ್ರಾ ಕೊ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕರು, ರಾಜ್ಯ ಹಿರಿಯ ಜೆಡಿಎಸ್ ಉಪಾಧ್ಯಕ್ಷರು, ಮುತ್ಸದ್ದಿ ರಾಜಕಾರಣಿಗಳು, ಜ್ಞಾನದ ಭಂಡಾರ, ವಾಗ್ಮಿ, ಚಿಂತಕರಾದ ಮಡಬೂರು ರಾಜೇಂದ್ರಣ್ಣನವರು ಭಾನುವಾರ ಸಂಜೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ತೆರಳಿ ಮಲೆನಾಡಿನ ಮರೆಯಾದ ಮಾಣಿಕ್ಯ ರಾಗಿದ್ದಾರೆ.
ಅವರ ಪಾರ್ಥಿವ ಶರೀರ ಮಡಬೂರು ಸ್ವಗೃಹದಿಂದ ಹೊರಟು ಪಟ್ಟಣದ ಬೈಪಾಸ್ ಮಾರ್ಗವಾಗಿ ದೀಪ್ತಿ ಸರ್ಕಲ್ ಬಳಿ ಎರಡು ಗಂಟೆಯ ಆಸುಪಾಸು ತಲುಪಿತ್ತು, ಸಮುದಾಯದ ಜನಾಂಗದ ಮುಖಂಡರು, ಎಲ್ಲಾ ಧರ್ಮದ ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯು ದೀಪ್ತಿ ಸರ್ಕಲ್ನಿಂದ ರಾಜಬೀದಿಯ ಮೂಲಕ ಡಿಸಿಎಂಸಿ ಸ್ಟೇಟ್ ಕ್ಯಾಂಪಸ್ ಆವರಣದಲ್ಲಿ ಸಾರ್ವಜನಿಕ-ಬಂಧು ಬಳಗದವರಿಗೆ ಅಂತಿಮ ನಮನಕ್ಕಾಗಿ ಇಡಲಾಗಿತ್ತು.
ಎನ್.ಆರ್.ಪುರ ತಾಲೂಕಿನ ಮಡಬೂರಿನ ರಾಜೇಂದ್ರರವರು ಒಮ್ಮೆ ಜಿಲ್ಲಾ ಪರಿಷತ್ ಆಯ್ಕೆಯಾಗಿ ಬಹಳ ಖ್ಯಾತರಾದವರು. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರಾಗಿದ್ದರು.
ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದಿಂದ ಎರಡು ಬಾರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು ಕೂಡ, ಕರ್ನಾಟಕದಲ್ಲಿ ಜೆಡಿಎಸ್ ಆಡಳಿತದ ಸಂದರ್ಭದಲ್ಲಿ ರಾಜೇಂದ್ರರವರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವ ಭರವಸೆ ನೀಡಿದ್ದರಾದರೂ ಮಾಜಿ ಸಿಎಂ ಕುಮಾರಸ್ವಾಮಿ ಕೊನೆ ಘಳಿಗೆಯಲ್ಲಿ ಭರವಸೆ ಭರವಸೆಯಾಗಿ ಉಳಿಸಿ ಹೆಚ್ಡಿಕೆ ರಾಜಕೀಯವಾಗಿ ನಾಟಕವಾಡಿ ಚಿಂತಕರ ಚಾವಡಿಗೆ ಅರ್ಹತೆ ಇದ್ದರೂ ಸಫಲತೆ ಕಾಣಲು ಬಿಡಲಿಲ್ಲ. ಇಂದಿಗೂ ಕ್ಷೇತ್ರದ ಕಾರ್ಯಕರ್ತರಿಗೆ ಅಸಮಾಧಾನದ ಹೊಗೆ ಜೋರಾಗಿ ಬೀಸುತ್ತಿದೆ.
ರಾಜೇಂದ್ರ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಸಮಾಜ ಸುಧಾರಕ, ಮಲೆನಾಡು ಕಂಡಂತಹ ಪ್ರಜ್ಞಾವಂತ ವ್ಯಕ್ತಿಯಾಗಿ ಮಲೆನಾಡಿನ ಗಾಂಧಿ ದಿವಂಗತ
ಹೆಚ್.ಜಿ.ಗೋವಿಂದೇ ಗೌಡರ ಆತ್ಮೀಯರಲ್ಲಿ ಒಬ್ಬರಾಗಿದ್ದರು.
ಹೃದಯವಂತ, ಜಾತ್ಯಾತೀತ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, ಜನನಾಯಕರಾಗಿ ಜನರ ಮನಸ್ಸನ್ನು ಗೆದ್ದ ಹೆಚ್.ಟಿ.ಆರ್ ನಿಧನರಾಗಿರುವುದು ಮಲೆನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ಅಪ್ಪಟ ಸಮಾಜವಾದಿ, ಪ್ರಜಾತಂತ್ರವಾದಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಳವಾದ ಜ್ಞಾನ ಹೊಂದಿದಲ್ಲದೆ, ಎಲ್ಲಾ ವಿಷಯಗಳ ಬಗ್ಗೆ ಅರಿವಿದ್ದು, ಅವರೇ ಒಂದು ಜ್ಞಾನದ ಭಂಡಾರವಾಗಿದ್ದರು.
ಮನೆಯೇ ಒಂದು ಲೈಬ್ರರಿಯ ಕೇಂದ್ರವಾಗಿತ್ತು, ಎರಡು ಬಾರಿ ವಿಧಾನಸಭೆಗೆ ಶೃಂಗೇರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಗೆಲ್ಲಿಸುವ ಭಾಗ್ಯ ಕ್ಷೇತ್ರದ ಜನರಿಗೆ ಸಿಗಲಿಲ್ಲ. ಜೊತೆಗೆ ಗೋವಿಂದ ಗೌಡರು ರಾಜಕೀಯದಿಂದ ತಟಸ್ಥರಾಗಿ ಮನೆಯಲ್ಲಿ ಕುಳಿತಾಗ ಕಾರ್ಯಕರ್ತರಿಗೆ ಉತ್ತರಾಧಿಕಾರಿಯಂತೆ ಇದ್ದ ರಾಜೇಂದ್ರರವರಿಗೆ ಸಹಕಾರ ನೀಡಿದ್ದರೆ ಇಂದು ತಿರುಗಿ ನೋಡುವ ಸ್ಥಿತಿ ಇರುತ್ತಿರಲಿಲ್ಲ, ಗೌಡರು ರಾಜೇಂದ್ರರವರ ಕೈ ಹಿಡಿಯದಿರುವುದು ದೊಡ್ಡ ದುರಂತವಾಗಿದೆ, ಸಂತಾಪದ ದಿನದಂದು ಮಾಜಿ ಸಚಿವ, ಮಾಜಿ, ಮಾಜಿ ಶಾಸಕರೆಂದು ಉಚ್ಛರಿಸಬಹುದಿತ್ತು.
ಅನಾರೋಗ್ಯದ ಹಿನ್ನೆಲೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ಜೆಡಿಎಸ್ ಪಕ್ಷದ ನಾಯಕ ಹೆಚ್.ಟಿ ರಾಜೇಂದ್ರ (72) ದಾಖಲಿಸಲಾಗಿತ್ತು, ವಿಧಿ ಬರಹ ಬೇರೆಯೇ ಕಥೆ ಹೇಳಿ ಬಾರದ ಲೋಕಕ್ಕೆ ಕೊಂಡ್ಯೊಯಿತು.
ಅತ್ಯಂತ ನಿಷ್ಠಾವಂತ ಸೇನಾನಿಯಾಗಿ, ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ್ದ ಅವರು, ತಮ್ಮ ಇಡೀ ಬದುಕನ್ನು ಪಕ್ಷಕ್ಕೆ ಸಮರ್ಪಿಸಿಕೊಂಡಿದ್ದರು. ಶ್ರೀಯುತರ ಅಗಲಿಕೆ ಬಹುದೊಡ್ಡ ನಷ್ಟ, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಾ ವೈಯಕ್ತಿಕವಾಗಿ ನಾನು ಬಹಳ ದುಃಖಿತನಾಗಿದ್ದೇನೆ.