ಚಿಕ್ಕಮಗಳೂರು:- ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ತಂದೆಯವರಾದ ಮಾಜಿ ಸಚಿವ ಬೇಗಾನೆ ರಾಮಯ್ಯನವರು ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಸುಮಾರು 1:45ಕ್ಕೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1978ರಲ್ಲಿ ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬೇಗಾನೆ ರಾಮಯ್ಯ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ನೀರು ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮಯ್ಯ, 1972 ರಲ್ಲಿ ನರಸಿಂಹರಾಜಪುರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರಾಗಿ ಗ್ರಾಮೀಣ ಅಬಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ ರಾಮಯ್ಯ ಶೃಂಗೇರಿ ಕ್ಷೇತ್ರ ಕಂಡ ಅಪರೂಪದ ರಾಜಕಾರಣಿ. ಕೆ.ಎನ್ ವೀರಪ್ಪಗೌಡರ ಎದುರಿಗೆ ಪ್ರಚಂಡ ಮತಗಳಿಂದ ಗೆದ್ದ ರಾಮಯ್ಯ ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿದ್ದರು. ಮಲೆನಾಡು ಭಾಗದಲ್ಲಿ ಬೋರವೆಲ್ ರಾಮಯ್ಯ ಎಂದೇ ಜನಪ್ರಿಯರಾದರು. ಇವರ ಮಗಳು ಆರತಿ ಕೃಷ್ಣ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದಾರೆ.
ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
