ಬಳ್ಳಾರಿ

ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣ ಬೆಳೆದು ಬಂದ ದಾರಿ

ಬಳ್ಳಾರಿ:- ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣನವರು ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ತಿಪ್ಪಣ್ಣರವರು ಶ್ರೀಯುತ ಎನ್.ರುದ್ರಣ್ಣ ಮತ್ತು ಶ್ರೀಮತಿ ಹಂಪಮ್ಮ ಮಗನಾಗಿ 23-11-1928ರಲ್ಲಿ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಜನಿಸಿದರು.

ಶಿಕ್ಷಣ: ತುರುವನೂರಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಪ್ರೌಢಶಿಕ್ಷಣ- ಚಿತ್ರದುರ್ಗ ಸರ್ಕಾರಿ ಹೈಸ್ಕೂಲ್ ಇಂಟರ್ ಮೀಡಿಯಟ್-ಡಿ.ಆರ್.ಎಂ.ಕಾಲೇಜು, ದಾವಣಗೆರೆ, ಬಿ.ಎ., ಮಹಾರಾಜ ಕಾಲೇಜು, ಮೈಸೂರು ಬಿ.ಎಲ್., ಸರ್ಕಾರಿ ಕಾನೂನು ವಿದ್ಯಾಲಯ, ಬೆಂಗಳೂರಿನಲ್ಲಿ ತನ್ನ ಶಿಕ್ಷಣ ಪಡೆದರು.

ವಕೀಲ ವೃತ್ತಿ: 1954ರ ಮಾರ್ಚ್ ಒಂದರಿಂದ ಬಳ್ಳಾರಿಗೆ ಸ್ಥಳಾಂತರಗೊಂಡ ಇವರು 1960 ರಿಂದ 1965ರವರೆಗೆ 5 ವರ್ಷಗಳ ಕಾಲ ಬಳ್ಳಾರಿ ಜಿಲ್ಲೆ ಆಫಿಷಿಯಲ್ ರಿಸೀವರ್ ಆಗಿ ಸೇವೆ ಸಲ್ಲಿಸಿದರು.
1963 ರಿಂದ 1976 ರವರೆಗೆ ಬಳ್ಳಾರಿ ಜಿಲ್ಲೆಯ ಪಬ್ಲಿಕ್ ಪ್ರಾಸಿಕ್ಯೂಟರ್, 1971ರಿಂದ 1976ರವರೆಗೆ ಬಳ್ಳಾರಿ ಜಿಲ್ಲೆಯ ಸರ್ಕಾರಿ ವಕೀಲರಾಗಿ 1970 ರಿಂದ 1984ರವರೆಗೆ ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ (Karnataka Bar Council Member) 1981ರಿಂದ ಒಂದು ಸರದಿವರೆಗೆ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ಚೀನಾ ದೇಶದ ಕಾನೂನು ಇಲಾಖೆಯ ಇಚ್ಛೆಯಂತೆ ಭಾರತದ 10 ಹಿರಿಯ ವಕೀಲರಲ್ಲಿ ಒಬ್ಬರಾಗಿ 15 ದಿನಗಳ ಚೀನಾ ಪ್ರವಾಸ ಮತ್ತು ಅಧ್ಯಯನ ಮಾಡಿದರು. ಚೀನಾ ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಅಧ್ಯಯನದ ನಂತರ ಬಳ್ಳಾರಿ, ಬೆಂಗಳೂರು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವಕೀಲ ವೃತ್ತಿಯಲ್ಲಿ ಸತತವಾಗಿ 58 ವರ್ಷಗಳ ಕಾಲ ನಿರ್ವಹಿಸಿದರು. ಅತ್ಯುತ್ತಮ ರೀತಿಯಲ್ಲಿ ಕ್ರಿಮಿನಲ್‌ ವಾಜ್ಯಗಳನ್ನು ವಿಲೇವಾರಿ ಮಾಡಿದ್ದಕ್ಕಾಗಿ ಸೆಷನ್ಸ್ ಜಡ್ಜ್‌ರವರಿಗೆ White Glows Present ಮಾಡಿದ್ದು ಇವರ ಮೈಲಿಗಲ್ಲಾಗಿದೆ.

ವಿಧ್ಯಾಕ್ಷೇತ್ರ: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಸುಮಾರು 40 ವರ್ಷಗಳ ಕಾಲ ಅದರಲ್ಲಿ ತೊಡಗಿಕೊಂಡು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರೈಮರಿ, ಹೈಯರ್, ಕಾಲೇಜುಗಳು (ಬಿ.ಎ., ಬಿ.ಎಸ್ಸಿ., ಬಿ.ಕಾಂ), ಇಂಜಿನಿಯರಿಂಗ್‌ ಕಾಲೇಜುಗಳು, ಫಾರ್ಮಸಿ, ಲಾ-ಕಾಲೇಜು, ಬಿ.ಎಡ್. ಸಿ.ಪಿ.ಎಡ್ ಕಾಲೇಜುಗಳು, ಎಂ.ಸಿ.ಎ, ಎಂ.ಬಿ.ಎ. ಬಿ.ಬಿ.ಎಂ. ಹೀಗೆ ಸುಮಾರು 41 ವಿದ್ಯಾಸಂಸ್ಥೆಗಳ ಸ್ಥಾಪಿಸಿ ಶಿಕ್ಷಣ ಕ್ಷೇತ್ರದ ಪಿತಾಮಹರಾದರು. ಸುಮಾರು 13 ವರ್ಷಗಳ ಕಾಲ ಚುನಾಯಿತ ಸಿಂಡಿಕೇಟ್ ಸದಸ್ಯರಾಗಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆಯ ನಂತರ 5 ವರ್ಷಗಳ ಕಾಲ ಹಂಪೆ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸೇವೆ, 3 ವರ್ಷಗಳ ಕಾಲ ಬಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಅಕೆಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿ ಸೇವೆ ಸಲ್ಲಿಸಿದರು. ಲಂಡನ್, ಸ್ಯಾಟೆಂಡ್, ಎಡಿನ್‌ಬರೋ, ಆಕ್ಸ್‌ಫರ್ಡ್, ಪ್ಯಾರಿಸ್, ಜರ್ಮನಿ, ಚೀನಾ ದೇಶಗಳ (ವಿಶ್ವವಿದ್ಯಾಲಯಗಳ) ಕಾರ್ಯವೈಖರಿ ಮತ್ತು ಕಾರ್ಯನಿರ್ವಹಣೆಗಳ ಬಗ್ಗೆ ಅಧ್ಯಯನ ಮತ್ತು ಪ್ರವಾಸ ಮಾಡಿದರು.

ವಿದೇಶ: ಇಂಗ್ಲೆಂಡ್, ಸ್ಯಾಟಲೆಂಡ್, ಪ್ಯಾರಿಸ್, ಜರ್ಮನಿ, ಸ್ವಿಡರ್‌ಲೆಂಡ್ (2ಬಾರಿ) ಚೀನಾ, (3 ಬಾರಿ) ಶ್ರೀಲಂಕಾ, ಬ್ಯಾಂಕಾಕ್, ಸಿಂಗಪುರ ಮತ್ತು ಮಲೇಷಿಯಾ ಇತ್ಯಾದಿ ದೇಶಗಳಲ್ಲಿ ಪ್ರವಾಸ ಮಾಡಿ ಅನುಭವ ಪಡೆದುಕೊಂಡರು.

ರಾಜಕೀಯ: ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲರು ಮತ್ತು ರಾಮಕೃಷ್ಣ ಹೆಗಡೆಯವರ ಜೊತೆ 4 ಬಾರಿ ಕಾಂಗ್ರೆಸ್‌ ವಿರುದ್ಧ ಪಾರ್ಲಿಮೆಂಟಿನಲ್ಲಿ ಸೋಲು ಕಂಡು 3 ಬಾರಿ (18 ವರ್ಷ) ವಿಧಾನ ಪರಿಷತ್ತಿನ ಸದಸ್ಯರಾಗಿ 2 ಬಾರಿ ವಿಧಾನ ಪರಿಷತ್ತಿನ ಸಭಾಪತಿಯಾಗಿ 3 ವರ್ಷ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಜಂಟಿ ಸರ್ಕಾರದ ರೂವಾರಿಯಾದ ಇವರು ನಂತರದಲ್ಲಿ ರಾಜಕೀಯದಿಂದ ನಿವೃತ್ತಿಹೊಂದಿದರು.

ಸಾಮಾಜಿಕ ಕ್ಷೇತ್ರ: ಅಖಿಲ ಭಾರತ ವೀರಶೈವ ಮಹಾಸಭೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ( ಶ್ರೀ ಮಲ್ಲಾರಾಧ್ಯರ ಕಾಲದಿಂದ)2001ರಿಂದ ಆ.ಭಾ.ವೀ.ಮಹಾಸಭೆಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿ 2002ರಿಂದ ಅ.ಭಾ.ವೀ.ಮಹಾಸಭಾ ಉಪಾಧ್ಯಕ್ಷರಾಗಿ 2011 ರಲ್ಲಿ ಅ.ಭಾ.ವೀ.ಮಹಾಸಭೆ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ 08-10-2012ರ ಅಕ್ಟೋಬರ್ 08ರಿಂದ ಅ.ಭಾ.ವೀ.ಮಹಾಸಭ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಅನೇಕ ಸಂಘ ಸಂಸ್ಥೆಗಳಿಗೆ ಅಧ್ಯಕ್ಷರಾಗಿ, ಸಹಕಾರ ಸಂಘದ ಜಿಲ್ಲಾ
ಬ್ಯಾಂಕುಗಳ ಅಧ್ಯಕ್ಷರಾಗಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ತನ್ನ ಕಾರ್ಯ ಯಶಸ್ವಿಯಾಗಿ ನೆರವೇರಿಸಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಇವರ ಈ ಸಾಧನೆ ಇಂದಿನ ಯುವಕರಿಗೆ ಆದರ್ಶವಾಗಲಿ.

ಇಂದು ಅವರ ಅಂತಿಮ ದರ್ಶನಕ್ಕೆ ಬಳ್ಳಾರಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.