ಬೆಂಗಳೂರು

ಮುಂದಿನ ಎರಡು ದಿನಗಳ ಪೈಕಿ ಒಂದು ದಿನ ‘ಯೆಲ್ಲೋ ಅಲರ್ಟ್

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಈ ಮಳೆ ಶುಕ್ರವಾರವು ಮುಂದುವರಿದಿದೆ. ಒಳನಾಡು ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದಲೇ ಜೋರು ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಎಡೆಬಿಡದೇ ಭಾರಿ ಹಾಗೂ ಅತ್ಯಧಿಕ ಮಳೆ ಬರುವ ಸಾಧ್ಯತೆ ಇದೆ. ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಚಂಡಮಾರುತ ಪ್ರಸರಣ ಪ್ರಭಾವದಿಂದಾಗಿ ರಾಜ್ಯಾದ್ಯಂತ ಸೆಪ್ಟಂಬರ್ 2ರವರೆಗೆ ಒಂದು ವಾರಗಳ ಕಾಲ ಮಳೆ ಆಗಲಿದೆ. ಹವಾಮಾನದಲ್ಲಿ ವೈಪರೀತ್ಯಗಳು ಹಾಗೂ ನಿರಂತರ ಬದಲಾವಣೆಗಳಿಂದ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಮುಂದಿನ ಏಳು ದಿನಗಳ ಪೈಕಿ ಇಂದು ಮತ್ತು ನಾಳೆ (ಆಗಸ್ಟ್ 29, 30)ರಂದು ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ.

ಕರಾವಳಿ ಜಿಲ್ಲೆಗಳಲ್ಲಿ 200 ಮಿಲಿ ಮೀಟರ್‌ಗೂ ಅಧಿಕ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ರಣ ಮಳೆ ಆಗಲಿದ್ದು, ‘ರೆಡ್ ಅಲರ್ಟ್’ ನೀಡಲಾಗಿದೆ. ನಂತರ ಎರಡು ದಿನ ಉತ್ತರ ಕನ್ನಡ ಸೇರಿ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇಂದು ಬೆಳಗಾವಿ, ಬೀದರ್, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 115 ಮಿಲಿ ಮೀಟರ್‌ನಿಂದ ಗರಿಷ್ಠ 200 ಮಿಲಿ ಮೀಟರ್‌ವರೆಗೆ ಧಾರಾಕಾರ ಮಳೆ ಬರುವ ಸಂಭವವಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಪೈಕಿ ಒಂದು ದಿನ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ನಂತರದ ದಿನಗಳು ಅಂದರೆ ಸೆಪ್ಟಂಬರ್ 02ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಭಾರಿ ಮಳೆ, ರೆಡ್ ಅಲರ್ಟ್ ಪ್ರಯುಕ್ತ ಇಂದು ಆ.29ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ನೀಡಿ ಡಿಸಿ ಆದೇಶಿಸಿದ್ದಾರೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಮಳೆ ಇನ್ನಷ್ಟು ಜೋರಾದರೆ ಶನಿವಾರ ಮತ್ತು ಸೋಮವಾರವು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವ ನಿರೀಕ್ಷೆ ಇದೆ.

ಶುಕ್ರವಾರ ಬೆಳಗ್ಗೆಯೇ ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಮಬ್ಬು ಕವಿದಿದ್ದು, ಬಿಸಿಲಿನ ದರ್ಶನ ಆಗುವುದು ಅಪರೂಪ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಇನ್ನೂ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ದಿನವಿಡಿ ಮಬ್ಬು ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಯಾಗುತ್ತಿದ್ದಂತೆ ಮಳೆ ಶುರುವಾಗುತ್ತಿದೆ. ಮುಂದಿನ ಎರಡು ದಿನ ಇದೇ ರೀತಿಯ ಮೋಡ ಕವಿದ ಮತ್ತು ಚಳಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video