ಮೈಸೂರು:- ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದಲ್ಲಿ ಪಟ್ಟು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡಿದ್ದು ಲೋಕಾಯುಕ್ತ ಪೊಲೀಸರು ಮೇ 7ರಂದು ಅಂತಿಮ ವರದಿ ಸಲ್ಲಿಸಬೇಕಾಗಿತ್ತು. ಆದರೆ, ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಸ್ನೇಹಮಯಿ ಕೃಷ್ಣಾ ಅವರು, ಆರೋಪಗಳನ್ನು ಸಾಬೀತುಪಡಿಸಲು ತಮಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿದೆ. ಈ ಮೂಲಕ ಅವರು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ.
ಹೈಕೋರ್ಟ್ ಸೂಚನೆಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಹಿಂದೆ ಜನವರಿಯಲ್ಲಿ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿದಂತೆ ನಾಲ್ವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಈ ವರದಿಗೆ ಆಕ್ಷೇಪ ಸಲ್ಲಿಸಿದ ಸ್ನೇಹಮಯಿ ಕೃಷ್ಣಾ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಪರಿಣಾಮವಾಗಿ, ನ್ಯಾಯಾಲಯವು ತನಿಖೆಯನ್ನು ಮುಂದುವರಿಸಿ, ಮೇ 7ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು.
ಸ್ನೇಹಮಯಿ ಕೃಷ್ಣಾ ಅವರು ಯುನೈಟೆಡ್ ನೊಂದಿಗೆ ಮಾತನಾಡಿ, ಮೇ 7ರಂದು ಲೋಕಾಯುಕ್ತ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸಬೇಕಾಗಿತ್ತು. ಆದರೆ, ಮತ್ತೆ ಕಾಲಾವಕಾಶ ಕೋರಿ ಅನವಶ್ಯಕ ವಿಳಂಬ ಮಾಡುತ್ತಿದ್ದಾರೆ. ಅಲ್ಲದೆ 1 ರಿಂದ 4ನೇ ಆರೋಪಿಗಳ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ಹೇಳಿದರೆ, ಆರೋಪಗಳನ್ನು ಸಾಬೀತುಪಡಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.