ಬೆಂಗಳೂರು

ಮೂರು ದಿನಗಳ ಭೇಟಿಗಾಗಿ ಸುರ್ಜೇವಾಲ ಬೆಂಗಳೂರಿಗೆ

ಬೆಂಗಳೂರು:- ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ. ಸರ್ಕಾರದಲ್ಲಿನ ಭ್ರಷ್ಟಾಚಾರ, ಕ್ಷೇತ್ರ ಅಭಿವೃದ್ಧಿಗೆ ಅನುದಾನದ ಕೊರತೆ ಮತ್ತು ‘ರಾಜಕೀಯ ಕ್ರಾಂತಿಯ ಕುರಿತ ಹೇಳಿಕಗಳಿಂದ ಹಲವಾರು ಹಿರಿಯ ಶಾಸಕರು ಪಕ್ಷವನ್ನು ಮುಜುಗರಕ್ಕೀಡು ಮಾಡಿರುವ ಸಮಯದಲ್ಲಿ ಸುರ್ಜೇವಾಲ ರಾಜ್ಯಕ್ಕೆ ಬರುತ್ತಿದ್ದಾರೆ.

ಸುರ್ಜೆವಾಲಾ ಅವರ ಭೇಟಿಗೂ ಪಕ್ಷ ಅಥವಾ ಸರ್ಕಾರದಲ್ಲಿ ಅಧಿಕಾರ ಬದಲಾವಣೆಯ ಊಹಾಪೋಹಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ನಾಯಕರು ಹೇಳಿದ್ದಾರೆ. ಕೆಲವು ಶಾಸಕರು ತಮ್ಮ ದೂರುಗಳನ್ನು ಹೇಳಿಕೊಂಡಿರುವುದರಿಂದ, ಸುರ್ಜೇವಾಲ ಅವರ ಜತೆ ಜೊತೆ ಮಾತನಾಡುತ್ತಾರೆ ಮತ್ತು ಅವರ ಸಮಸ್ಯೆಗಳನ್ನು ಆಲಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ತಿಳಿಸಿದ್ದಾರೆ. ನಾಯಕತ್ವ ಬದಲಾವಣೆಯ ವರದಿಗಳು ಆಧಾರರಹಿತವಾಗಿವೆ. ಸುರ್ಜೆವಾಲ ಅವರು ಶಾಸಕರೊಂದಿಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮೂರು ದಿನಗಳ ಬೆಂಗಳೂರು ಭೇಟಿಯ ಸಮಯದಲ್ಲಿ ಸುರ್ಜೇವಾಲ ಅವರು ಮೈಸೂರು ಮತ್ತು ಬೆಂಗಳೂರು ವ್ಯಾಪ್ತಿಯ ಶಾಸಕರನ್ನು ಭೇಟಿ ಮಾಡಲಿದ್ದಾರೆ. ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಪ್ರಮುಖರಾದ ಬಿ.ಆರ್. ಪಾಟೀಲ್, ರಾಜು ಕಾಗೆ ಮತ್ತು ಬಸವರಾಜ ರಾಯರೆಡ್ಡಿ ಸೇರಿದಂತೆ ಹಿರಿಯ ಶಾಸಕರನ್ನು ಅವರು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ.

ಸುರ್ಜೇವಾಲ ಬೆಂಗಳೂರು ಭೇಟಿಯ ಕುರಿತು ಸುದ್ದಿಗಾರರ ಜತೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹೌದು, ಅವರು ಶಾಸಕರನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದಾರೆ. ಅವರು ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಭೇಟಿಯ ಕುರಿತು ನಾನು ಶಾಸಕರಿಗೆ ಸಂದೇಶಗಳನ್ನು ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.