ಬೆಂಗಳೂರು:- ಮೆಟ್ರೋಗೆ 2005ರಲ್ಲಿ ಚಾಲನೆ ನೀಡಿದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಶೇ 50 ರಷ್ಟು ವೆಚ್ಚವನ್ನು ಭರಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರವೇ ಹೆಚ್ಚು ವೆಚ್ಚ ಭರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಕಾರ್ಯಕ್ರಮ ಎಂದು ಹೇಳಲು ಬಯಸುತ್ತೇನೆ, ಈಗಾಗಲೇ ಶೇ 96.10 ಮೆಟ್ರೋ ಕೆಲಸ ಪೂರ್ಣಗೊಂಡಿದೆ. ಇದಕ್ಕೆ ರಾಜ್ಯ ಸರ್ಕಾರ ಸುಮಾರು 25 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ನೀಡಿರುವುದು 7 ಸಾವಿರ ಕೋಟಿ ರೂ. ಮಾತ್ರ. ಆದರೆ, ಕೇಂದ್ರ ಸರ್ಕಾರ ಸಾಲ ನೀಡುತ್ತಿದ್ದು, ಅದನ್ನು ನಾವು ಬಡ್ಡಿ ಸಹಿತ ಹಿಂದಿರುಗಿಸಬೇಕಿದೆ. ನಾವು ಇದುವರೆಗೂ 3 ಸಾವಿರ ಕೋಟಿ ರೂ. ಮರುಪಾವತಿ ಮಾಡಿದ್ದೇವೆ ಎಂದು ಸಿಎಂ ಹೇಳಿದರು.
ಇಂದು ಉದ್ಘಾಟನೆಗೊಂಡಿರುವ 19.1 ಕಿಮೀ ಉದ್ದದ ಹಳದಿ ಮಾರ್ಗಕ್ಕೆ ಸುಮಾರು 7.1 ಸಾವಿರ ಕೋಟಿ ರೂ. ವೆಚ್ಚ ತಲುಪಿದೆ. ಇದರಿಂದ ಪ್ರತಿದಿನ 3.5 ಲಕ್ಷ ಪ್ರಯಾಣಿಕರು ಅನುಕೂಲ ಪಡೆಯಬಹುದಾಗಿದೆ. ಇದುವರೆಗೂ ಮೆಟ್ರೋ ರೈಲಿನಲ್ಲಿ ಪ್ರತಿದಿನ 9 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಮಿತಿ ಶೀಘ್ರದಲ್ಲೇ 12.5 ಲಕ್ಷ ತಲುಪಿದೆ. ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ವಾಹನದಟ್ಟಣೆ ಇಲ್ಲಿ ಹೆಚ್ಚಾಗಿದೆ. ಈ ಮೆಟ್ರೋ ಯೋಜನೆಯಿಂದ ವಾಹನದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, 2030 ರ ಹೊತ್ತಿಗೆ 220 ಕಿಮೀ ಉದ್ದದ ಮೆಟ್ರೋ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದು ನಿರ್ಮಾಣಗೊಂಡರೆ ಪ್ರತಿದಿನ 30 ಲಕ್ಷ ಮಂದಿ ಮೆಟ್ರೋ ಸೇವೆ ಪಡೆಯಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
3ಎ ಯೋಜನೆಗೆ ಡಿಪಿಆರ್ ಸಿದ್ದಗೊಂಡಿದೆ. ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ನಿರ್ಮಾಣ ಕಾರ್ಯ ಪ್ರಾರಂಭಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಜನರ ವಾಹನದಟ್ಟಣೆ ಸಮಸ್ಯೆಯನ್ನು ನೀಗಿಸುವ ಕೆಲಸ ಕರ್ನಾಟಕ ಸರ್ಕಾರ ಮಾಡಲಿದೆ ಎಂದು ನುಡಿದರು. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀಡುವಂತೆ ನಮ್ಮ ರಾಜ್ಯಕ್ಕೂ ಸಹ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿನಲ್ಲಿ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ, ಮೆಟ್ರೋ ಕಿತ್ತಳೆ ಹಂತಕ್ಕೆ ಶಂಕುಸ್ಥಾಪನೆ ಹಾಗೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ.
Leave feedback about this