ಚಿಕ್ಕಮಗಳೂರು:- ಶೃಂಗೇರಿ ಕ್ಷೇತ್ರದ 3 ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಏಳುನೂರು ಕೋಟಿ ರೂಪಾಯಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಹಣ ಮಂಜೂರಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಅವರು ಶನಿವಾರವಾದ ಇಂದು ಜಿಲ್ಲೆಯ ನ.ರಾ.ಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಂಗಾ ನದಿ ಹಾಗೂ ಭದ್ರಾ ನದಿಗಳ ನೀರನ್ನು ಉಪಯೋಗಿಸಿಕೊಂಡು ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗುತ್ತಿದೆ, ಜಲಜೀವನ್ ಮಿಷನ್ ಯೋಜನೆಗೂ ಇದನ್ನು ಸೇರಿಸಲಾಗುವುದು. ಇದರಿಂದ ಪ್ರತಿ ಮನೆಗೂ ಶುದ್ದವಾದ ಕುಡಿಯುವ ನೀರು ನೀಡಲಾಗುವುದೆಂದ ಅವರು ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಒಟ್ಟಾಗಿ ಕೆಲಸ ಮಾಡಿದರೆ ಕುಡಿಯುವ ನೀರಿನ ಯಶಸ್ವಿಯಾಗಲಿದೆ ಹಾಗೇಯೇ
ಜಲಜೀವನ್ ಯೋಜನೆಯಡಿ ಕಾಮಗಾರಿಯನ್ನು ಪಿಡಿಓಗಳು ತೃಪ್ತಿಯಾಗಿದ್ದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಿ, ಕಳಪೆ ಕಾಮಗಾರಿಯಾಗಿದ್ದರೆ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಸೂಚಿಸಿದರು.
ವೇದಿಕೆಯಲ್ಲಿ ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ತಾಲೂಕು ಪಂಚಾಯಿತಿ ಇ.ಓ. ನವೀನ್ ಕುಮಾರ್, ತಹಶೀಲ್ದಾರ್ ತನುಜ ಟಿ.ಸವದತ್ತಿ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೊಪ್ಪ ಡಿ.ಎಫ್.ಓ ಶಿವಶಂಕರ್, ನೋಡಲ್ ಅಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕೆಡಿಪಿ ಸದಸ್ಯರಾದ ಕೆ.ವಿ.ಸಾಜು, ಪ್ರವೀಣ್, ಶಶಿಕುಮಾರ್, ಮಾಳೂರು ದಿಣ್ಣೆ ರಮೇಶ್, ಅಂಜುಂ, ಸಮೀರಾ ನಹೀಂ, ಕೊಪ್ಪ ಎ.ಪಿ.ಎಂ.ಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಪಿ.ಸಿ.ಎ.ಆರ್.ಡಿ.ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಟಿ.ಎ.ಪಿ.ಸಿ.ಎಂ.ಸಿ.ಅಧ್ಯಕ್ಷ ಎಸ್.ಗೋಪಾಲ್, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಂದೀಪ್ ಕುಮಾರ್, ತಾ.ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿ.ಡಿ.ಓ.ಗಳು ಭಾಗವಹಿಸಿದ್ದರು.