ಬೆಂಗಳೂರು:- ಧರ್ಮಸ್ಥಳದಲ್ಲಿ ನಡೆದ ಯುವತಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಹುತೇಕ ಮುಚ್ಚಿಹೋಗಿತ್ತು. ಯುಟ್ಯೂಬರ್ ಸಮೀರ್ ಈ ಕುರಿತು ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಮಾಡಿದ ʼಧರ್ಮಸ್ಥಳ ಹಾರರ್ʼ ಎಂಬ ವಿಡಿಯೊವನ್ನು ಮಾಡಿದ್ದರು.
ಇದರಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಊರಿನ ಮುಖಂಡ, ದೇವಮಾನವ ಎಂದು ಕರೆಸಿಕೊಳ್ಳುವ ವ್ಯಕ್ತಿಗೆ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧವಿದೆ ಎಂದು ಆರೋಪಿಸಿದ್ದರು.
ಕೇವಲ ಈ ಪ್ರಕರಣ ಮಾತ್ರವಲ್ಲದೇ ಧರ್ಮಸ್ಥಳದಲ್ಲಿ ಇನ್ನೂ ಹಲವಾರು ಪ್ರಕರಣಗಳಿವೆ, ಅವುಗಳಿಗೂ ಇದೇ ಊರ ಮುಖಂಡ ಕಾರಣ ಎಂದು ತಿಳಿಸಿದ್ದರು.
ಎಲ್ಲಿಯೂ ಹೆಸರನ್ನೇ ತೆಗೆದುಕೊಳ್ಳದಿದ್ದ ಸಮೀರ್ ಈ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು ಹಾಗೂ ಜನರಿಗೆ ಪ್ರಕರಣದ ಕುರಿತು ಇದ್ದ ಅಭಿಪ್ರಾಯವನ್ನೂ ಸಹ ಬದಲಾಯಿಸಿತ್ತು.
ಇದೀಗ ಸಮೀರ್ ಮಾಡಿದ್ದ ಆರೋಪದಂತೆಯೇ ಧರ್ಮಸ್ಥಳದಲ್ಲಿ ಹಲವಾರು ಅತ್ಯಾಚಾರ ಕೊಲೆ ನಡೆದಿದ್ದು, ಮೃತದೇಹಗಳನ್ನು ನಾನೇ ಹೂತಿದ್ದೇನೆ, ಪಾಪಪ್ರಜ್ಞೆ ಕಾಡುತ್ತಿದ್ದು, ನಾನು ಅವುಗಳನ್ನು ತೆಗೆದು ತೋರಿಸುತ್ತೇನೆ ಎಂದು ವ್ಯಕ್ತಿಯೋರ್ವ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದು, ತನ್ನ ಕೈನಲ್ಲಿ ಬಲವಂತದಿಂದ ಈ ಕೆಲಸ ಮಾಡಿಸಿದರು ಎಂದು ಹೇಳಿಕೊಂಡಿದ್ದಾನೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಮೀರ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನಕಲಿ ದೇವಮಾನವ ದೇಶ ಬಿಡುವಂತಹ ಸಾಧ್ಯತೆ? ಭಾರತ ದೇಶಕ್ಕೆ ಇಟಲಿ ದೇಶದ ಜೊತೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ನಕಲಿ ದೇವಮಾನವ ಅಲ್ಲೇನಾದ್ರೂ ಹೋದ್ರೆ ಹಿಡಿಯೋಕೆ ಸಾಧ್ಯವೇ ಇಲ್ಲʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಮೀರ್ ತನ್ನ ವಿಡಿಯೊದಲ್ಲಿನ ʼಧರ್ಮಸ್ಥಳ ಗೌಡ್ರು ಕುಟುಂದ ಮುಖ್ಯಸ್ಥʼ ದೇಶ ಬಿಡುವ ಸಾಧ್ಯತೆ ಇವೆ ಎಂದು ಎಚ್ಚರಿಸಿದ್ದಾರೆ.