ಚಿಕ್ಕಮಗಳೂರು:- ಯೋಗವು ಸುಮಾರು 5000 ವರ್ಷಗಳ ಹಿಂದೆಯೇ ಈ ಭೂಮಿಯಲ್ಲಿ ಮಹಾನ್ ಯೋಗಿ ಶ್ರೀ ಪತಂಜಲಿ ಮಹರ್ಷಿ ಇವರಿಂದ ಪರಿಚಯವಾಯಿತು ಎಂದು ಶಿಕ್ಷಕ ರಾಜಕುಮಾರ ಕೆ.ಎಸ್ ಯೋಗದ ಕುರಿತು ಸುಧೀರ್ಘ ಉಪನ್ಯಾಸ ನೀಡಿದರು.
ಅವರು ಜಿಲ್ಲೆಯ ನ.ರಾ.ಪುರ ಪಟ್ಟಣದ ರೋಟರಿ ಹಾಲ್ ನಲ್ಲಿ ನಡೆದ ವಾರದ ಸಭೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಉಪನ್ಯಾಸಕರಾಗಿ ಆಗಮಿಸಿ, ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ. ರಾಷ್ಟ್ರದೆಲ್ಲೆಡೆ ಖ್ಯಾತಿ ಪಡೆದ ಈ ಯೋಗದಿಂದ ಮನುಕುಲದ ಆರೋಗ್ಯಕ್ಕೆ ಉತ್ತಮ ಪರಿಣಾಮಗಳಾಗುತ್ತಿರುವ ಬಗ್ಗೆ 2014ರಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಹಿತಿ ನೀಡಿದ ಪರಿಣಾಮ, ವಿಶ್ವ ಸಂಸ್ಥೆ ಯೋಗವನ್ನು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ತೀರ್ಮಾನಿಸಿ, ಪ್ರತಿ ವರ್ಷ ಜೂನ್ 21ಕ್ಕೆ ವಿಶ್ವ ಯೋಗ ದಿನಾಚರಣೆ ನಡೆಸಲು ದಿನಾಂಕ ಘೋಷಣೆ ಮಾಡಿತು ಎಂದರು.
ಮಾತು ಮುಂದುವರಿದ ರಾಜಕುಮಾರ್ ರವರು, ಯೋಗವು ದೇಹ ಮತ್ತು ಮನಸುಗಳನ್ನು ಒಗ್ಗೂಡಿಸುವ ಒಂದು ಪ್ರಕ್ರಿಯೆಯಾಗಿದೆ. ಯೋಗವು ಎಂಟು ಹಂತಗಳನ್ನು ಹೊಂದಿದೆ. ಅವುಗಳೆಂದರೆ. ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಯೋಗಭ್ಯಾಸವನ್ನು ಯಾವುದೇ ಜಾತಿ, ಧರ್ಮ, ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ಎಲ್ಲರೂ ಮಾಡಬಹುದಾಗಿದೆ. ಯೋಗಾರ್ಥಿಗಳಿಗೆ ಯೋಗ ಪ್ರಾರಂಭಿಸುವ ಮೊದಲು ಯಮ ಮತ್ತು ನಿಯಮಗಳ ಬಗ್ಗೆ ಒಂದಷ್ಟು ಅರಿವಿರಬೇಕಾದ ಅನಿವಾರ್ಯತೆ ಇರುತ್ತದೆ. ಯೋಗ ಪ್ರಾರಂಭಿಸುವ ಮೊದಲು ಪೂರ್ವ ಸಿದ್ಧತೆ, ಯೋಗ ಪ್ರಾರ್ಥನೆ, ಶಿಥಳಿಕರಣ ವ್ಯಾಯಾಮದ ಅವಶ್ಯಕತೆ ಇದೆ. ನಂತರ 12 ಭಂಗಿಯ ಸೂರ್ಯ ನಮಸ್ಕಾರ ಮುಂದುವೆರೆದು ಯೋಗಾಸನಗಳು ಮತ್ತು ಪ್ರಾಣಯಾಮಗಳನ್ನು ರೂಢಿಸಿಕೊಳ್ಳುವುದು ಉತ್ತಮ.
ಯೋಗಾಸನಗಳಲ್ಲಿ ಕುಳಿತು ಮಾಡುವ ಆಸನಗಳು, ಅಂಗಾತ ಮಲಗಿ ಮಾಡುವ ಆಸನಗಳು, ಬೋರಲು ಮಲಗಿ ಮಾಡವ ಆಸನಗಳು, ಮತ್ತು ನಿಂತು ಮಾಡುವ ಆಸನಗಳಿರುತ್ತವೆ. ನಿಮ್ಮ ಸಮಯ ಮತ್ತು ಸಾಮರ್ಥ್ಯ ನೋಡಿಕೊಂಡು ಆಯ್ದ ಕೆಲವನ್ನು ಮಾತ್ರ ಅಭ್ಯಾಸ ಮಾಡುವುದು ಕ್ಷೇಮ. ಯೋಗವು ಯಾವುದೇ ಖರ್ಚಿಲ್ಲದೇ ಉಚಿತವಾಗಿ ತಮ್ಮ ತಮ್ಮ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವಾಸ್ತ್ಯಕ್ಕೆ ಒದಗಿಬಂದ ಭಾಗ್ಯವೇ ಸರಿ ಎಂದು ತಿಳಿಸಿದರು. ತಾವು ಮಾತ್ರವಲ್ಲದೆ ತಮ್ಮ ಮನೆಯ ಸದಸ್ಯರೆಲ್ಲರೂ ಈ ಯೋಗವನ್ನು ನಿತ್ಯ ಮಾಡುವುದರೊಂದಿಗೆ ನಿಮ್ಮೆಲ್ಲರ ಆರೋಗ್ಯಕ್ಕೆ ಆದ್ಯತೆ ನೀಡಿರಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ರೊಟರಿಯನ್ ದಿವಾಕರ್ ಜಿ ಆರ್ ವಹಿಸಿದ್ದರು. ಉಪನ್ಯಾಸ ನೀಡಿದ ರಾಜಕುಮಾರ್ ಇವರನ್ನು ರೋಟರಿ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ರೋಟರಿ ಸದಸ್ಯರುಗಳಾದ ಶಾಂತಕುಮಾರ್, ಧನಂಜಯ, ಡಾ, ಎಲ್ದೋಸ್, ಕಣಿವೆ ವಿನಯ್, ಲೋಕೇಶ್, ಸೋಮಶೇಖರ್, ಕಿರಣ್, ಮನೀಶ್, ಚೇತನ್, ವಿದ್ಯಾನಂದಕುಮಾರ್, ಲೋಕೇಶ್ ಉಪಸ್ಥಿತರಿದ್ದರು.