ತುಮಕೂರು

ರಸ್ತೆಯಲ್ಲಿ ನಾಲ್ಕು ಕಡೆ ಮನುಷ್ಯನ ದೇಹದ ಕೆಲ ಭಾಗಗಳು, ಆತಂಕ ಸೃಷ್ಟಿ

ತುಮಕೂರು:- ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ಹೊರ ವಲಯದ ಮುತ್ಯಲಮ್ಮ ದೇವಸ್ಥಾನದಿಂದ ಸರಿಸುಮಾರು ಮೂರು ಕಿ.ಮೀ ವ್ಯಾಪ್ತಿಯ ಒಂದೇ ರಸ್ತೆಯಲ್ಲಿ ನಾಲ್ಕು ಕಡೆ ಮನುಷ್ಯನ ದೇಹದ ಕೆಲ ಭಾಗಗಳು ಸಿಕ್ಕಿದ್ದು, ಆತಂಕ ಸೃಷ್ಟಿಸಿದೆ.

ಇಂದು (ಆಗಸ್ಟ್ 07) ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈತನೋರ್ವ ಹೊಲದ ಕಡೆ ಹೋಗುವಾಗ ಕೈ ತುಂಡು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಕಪ್ಪು ಕವರ್ ನಲ್ಲಿ ಕೈ ತುಂಡು ಪತ್ತೆಯಾಗಿದ್ದು, ಅದೇ ರಸ್ತೆಯಲ್ಲಿ ತಡಕಾಡಿದ ಪೊಲೀಸರಿಗೆ ಸರಿಸುಮಾರು 3 ಕಿ.ಮಿ ವ್ಯಾಪ್ತಿಯಲ್ಲಿ ಮತ್ತೊಂದು ಕೈ, ಹೊಟ್ಟೆಯ ಭಾಗದ ತುಂಡು ಹಾಗೂ ಕರುಳು ಪತ್ತೆಯಾಗಿದೆ. ಎಲ್ಲವನ್ನು ಹಳದಿ ಹಾಗೂ ಕಪ್ಪು ಕವರ್ ನಲ್ಲಿಟ್ಟು ರಸ್ತೆಯ ಒಂದೇ ದಿಕ್ಕಿನ ಕಡೆ ಎಸೆದಿದ್ದು ಹಲವು ಅನುಮಾನ ಮೂಡಿಸಿದೆ.

ಇನ್ನು ಪೊಲೀಸರ ಈ ತಲಾಶ್ ವೇಳೆ ಈವರೆಗೂ ಮೃತದೇಹದ ತಲೆ ಹಾಗೂ ಕಾಲಿನ ಭಾಗ ಪತ್ತೆಯಾಗಿಲ್ಲ. ಪತ್ತೆಯಾದ ದೇಹದ ಭಾಗಗಳು ಪುರುಷರದ್ದೋ ಅಥವಾ ಮಹಿಳೆಯದ್ದೋ ಎನ್ನುವುದು ಇನ್ನು ಗೊಂದಲವಾಗಿದೆ. ಪ್ರಾಥಮಿಕವಾಗಿ ಕೈ ಮೇಲೆ ಕಂಡ ಟ್ಯಾಟುವಿನಿಂದ ಇದು ಮಹಿಳೆಯ ಶವ ಎನ್ನುವ ಅನುಮಾನ ಮೂಡಿದೆ. ಅಧಿಕೃತ ಮಾಹಿತಿಗಾಗಿ ಪತ್ತೆಯಾದ ಬಿಡಿ ಭಾಗಗಳ ಎಫ್ ಎಸ್ ಎಲ್ ಗೆ ರವಾನೆ ಮಾಡಲು ಪೊಲೀಸರು ನಿರ್ಧರಿಸಿದ್ದು, ವರದಿ ಆಧಾರದಲ್ಲಿ ಗುರುತು ಪತ್ತೆಗೆ ಮುಂದಾಗಿದ್ದಾರೆ. ಕೊಳಾಲ ಹಾಗೂ ಕೊರಟಗೆರೆ ಠಾಣಾ ವ್ಯಾಪ್ತಿಯ ನಾಲ್ಕು ಕಡೆ ಸಿಕ್ಕ ದೇಹದ ಬಿಡಿ ಭಾಗಗಳ ತನಿಖೆ ಚುರುಕುಗೊಂಡಿದೆ.

ಸದ್ಯ ಅಪರಿಚಿತ ಶವ ಪತ್ತೆ ಸಂಬಂಧ ಕೊರಟಗೆರೆ ಪೊಲೀಸರಿಂದ ತನಿಖೆ ಆರಂಭವಾಗಿದ್ದು, ಅಪರಿಚಿತ ಶವ ಗುರುತು ಪತ್ತೆ ಕಾರ್ಯ ಆರಂಭವಾಗಿದೆ. ಸ್ಥಳೀಯವಾಗಿ ಕಾಣೆಯಾದವರ ಬಗ್ಗೆ ಮಾಹಿತಿ ಪಡೆಯುವ ಮೂಲಕ ಗುರುತು ಪತ್ತೆಗೆ ಮುಂದಾಗಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video