ತುಮಕೂರು:- ರಾಜ್ಯ ರಾಜಕೀಯದಲ್ಲಿ ಡಿಸೆಂಬರ್ ವೇಳೆಗೆ ಅನೇಕ ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದರೆ, ಯಾವ ರೀತಿ ಬದಲಾವಣೆ ಎಂದು ಹೇಳಲಾಗುವುದಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇಂದು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜಕೀಯ ಯಾವಾಗ ಬೇಕಾದರೂ ತಿರುವು ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಕಾರ್ಯಕರ್ತರು ಪರಿಸ್ಥಿತಿಯನ್ನು ಅರಿತು ಸದಾ ಸಿದ್ಧರಿರಬೇಕು ಎಂದ ಅವರು, ದ್ವೇಷದ ರಾಜಕಾರಣ ಹೆಚ್ಚುಕಾಲ ನಡೆಯುವುದಿಲ್ಲ. ಜನರಿಗೆ ವಾಸ್ತವಿಕತೆ ಅರ್ಥವಾಗಿರುವುದರಿಂದ ತಿರುಗೇಟು ನೀಡಲು ಸಿದ್ಧರಿದ್ದಾರೆ. ಸರ್ಕಾರವು ದ್ವೇಷದ ರಾಜಕಾರಣವನ್ನು ಬದಿಗೊತ್ತಿ ಅಭಿವೃದ್ಧಿಯತ್ತ ಗಮನಹರಿಸುವಂತೆ ತಿಳಿಸಿದರು.
ಚುನಾವಣೆಗಳಲ್ಲಿ ಸೋಲು, ಗೆಲುವು ಸಾಮಾನ್ಯವಾಗಿದ್ದು ಅಧಿಕಾರಕ್ಕಿಂತ ಜನರ ಮಧ್ಯೆ ಇದ್ದುಕೊಂಡು ಕೆಲಸ ಮಾಡಿದ್ದಲ್ಲಿ ಜನರ ಮನಗೆಲ್ಲಲು ಸಾಧ್ಯ. ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಹೇಳಿದರು.
ರಾಜ್ಯದಾದ್ಯಂತ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಮಾಡಿ ಸದಸ್ಯತ್ವ ನೋಂದಣಿ ಮಾಡಿಸಲಾಗುವುದು. ಕಾರ್ಯಕರ್ತರು ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸದಸ್ಯತ್ವ ಪಡೆದುಕೊಳ್ಳುವಂತೆ ಮಾಡಬೇಕಾಗಿದೆ. ಕಾರ್ಯಕರ್ತರು ಒಗ್ಗೂಡಿದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಜನವಿರೋಧಿ ಹಾಗೂ ರೈತ ವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ರಾಜ್ಯ ಸರ್ಕಾರದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ಇರುವ ಜನರ ಮನಸ್ಸನ್ನು ಗೆಲ್ಲುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಪ್ರಾಬಲ್ಯವನ್ನು ತೋರಬೇಕಿದೆ ಎಂದರು.
ಸಿ.ಬಿ ಸುರೇಶ್ ಬಾಬು, ಬಿ.ಎಸ್ ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ ಅಂಜನಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕವೀರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮುಖಂಡ ಬೆಟ್ಟಸ್ವಾಮಿ, ಹೊನ್ನಗಿರಿ ಗೌಡ, ಯೋಗಾನಂದ ಕುಮಾರ್, ಶಿವಲಿಂಗಯ್ಯ, ಕರಿಯಪ್ಪ, ಸುರೇಶ್ ಗೌಡ, ರಘು ಶಿವಾನಂದ, ಸಿದ್ದಗಂಗಮ್ಮ ಭಾಗವಹಿಸಿದ್ದರು.