ಬೆಂಗಳೂರು

ರಾಜಣ್ಣ ನಿರ್ಗಮನದಿಂದಾಗಿ ಡಿ.ಕೆ.ಶಿವಕುಮಾರ್‌ ಬಣ ನಿರಾಳ.

ಬೆಂಗಳೂರು:- ಸಚಿವ ಸಂಪುಟದಿಂದ ಕೆ.ಎನ್‌.ರಾಜಣ್ಣ ಅವರು ನಿರ್ಗಮಿಸಿದ ಬಳಿಕ ತೆರವಾಗಿರುವ ಸಹಕಾರ ಖಾತೆಗಾಗಿ ಕಾಂಗ್ರೆಸ್‌‍ನಲ್ಲಿ ಭಾರೀ ಜಟಾಪಟಿ ನಡೆದಿದೆ. ಅಫೆಕ್ಸ್ ಬ್ಯಾಂಕ್‌, ಕೆಎಂಎಫ್‌ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಬಾಕಿ ಇರುವ ಹಂತದಲ್ಲೇ ರಾಜಣ್ಣ ಅವರು ಸಂಪುಟದಿಂದ ವಜಾಗೊಂಡಿದ್ದಾರೆ.

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಹೋದರರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್‌ ಕಣ್ಣಿಟ್ಟಿದ್ದಾರೆ. ಜೊತೆಗೆ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ, ಕೆಎಂಎಫ್‌ ಹಾಲಿ ಅಧ್ಯಕ್ಷ ಭೀಮ ನಾಯಕ್‌, ಶಾಸಕರಾದ ರಾಘವೇಂದ್ರ ಹಿಟ್ನಾಳ್‌ ಸೇರಿದಂತೆ ಹಲವಾರು ಮಂದಿ ಕಣ್ಣಿಟ್ಟಿದ್ದಾರೆ.

ಸಚಿವ ಸತೀಶ್‌ ಜಾರಕಿಹೊಳಿ ಅವರ ಬಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಘವೇಂದ್ರ ಹಿಟ್ನಾಳ್‌ ಅವರನ್ನು ಕೆಎಂಎಫ್‌ ಅಧ್ಯಕ್ಷನಾಗಿಸುವ ಪ್ರಯತ್ನದಲ್ಲಿತ್ತು. ರಾಜಣ್ಣ ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಈ ಹಂತದಲ್ಲಿ ಮತದಾರರ ಪಟ್ಟಿಯ ಅಕ್ರಮಗಳ ಕುರಿತು ಕಾಂಗ್ರೆಸ್‌‍ ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿ, ರಾಜಣ್ಣ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅವರಿಂದ ತೆರವಾಗಿರುವ ಸಹಕಾರ ಖಾತೆಯನ್ನು ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ.ಸುಧಾಕರ್‌ ಅವರಿಗೆ ವಹಿಸಬೇಕು ಎಂದು ಒಂದು ಬಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದೆ.

ಆದರೆ ಸದರಿ ಖಾತೆಯನ್ನು ತಮಗೆ ನೀಡಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಸಹಕಾರ ಖಾತೆಯನ್ನು ಮುಖ್ಯಮಂತ್ರಿ ಅವರ ಬಳಿಗೆ ಇರಿಸಿಕೊಳ್ಳಬೇಕು ಅಥವಾ ತಮಗೆ ನೀಡಿ, ಇಲ್ಲವಾದರೆ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್‌ ಅವರಿಗೆ ವಹಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ.

ಸಹಕಾರ ಖಾತೆ ಸದ್ಯದ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆ. ಯಶಸ್ವಿನಿ ಯೋಜನೆ ಸಹಕಾರ ಕ್ಷೇತ್ರದಲ್ಲಿ ಸದಸ್ಯರ ನೇಮಕಾತಿ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳಿವೆ. ಕೆಎಂಎಫ್‌ ಹಾಗೂ ಅಫೆಕ್ಸ್ ಅಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌‍ ಪಾಲಿಗೆ ಪ್ರತಿಷ್ಠೆಯಾಗಿವೆ. ಈ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ಸಿನಲ್ಲಿ ಪ್ರಭಾವಿಗಳು ಹಾಗೂ ಪ್ರಭಾವಿಗಳ ಕುಟುಂಬದ ಸದಸ್ಯರು ಲಾಬಿ ನಡೆಸುತ್ತಿದ್ದಾರೆ. ರಾಜಣ್ಣ ಅವರ ನಿರ್ಗಮನದಿಂದಾಗಿ ಡಿ.ಕೆ. ಶಿವಕುಮಾರ್‌ ಅವರ ಬಣ ನಿರಾಳವಾಗಿದೆ.

ಈ ಎಲ್ಲಾ ಹುದ್ದೆಗಳಿಗೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಸುಲಭ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರಗಳಿವೆ. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಅಂತರ್ಮುಖಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮದೇ ಆದ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಕಾರ ಖಾತೆ ಈ ಹಂತದಲ್ಲಿ ಯಾರ ಪಾಲಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video