ಬೆಂಗಳೂರು:- ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ ನಂತರ ಕಾಂಗ್ರೆಸ್‌ನೊಳಗೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ರಾಜಣ್ಣ ವಿಚಾರದಲ್ಲಿ ಶಾಸಕರು, ಸಚಿವರು ಬಹಿರಂಗವಾಗಿ ಅನಗತ್ಯ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ.
ಮತಗಳ್ಳತನ ವಿಚಾರವಾಗಿ ಪಕ್ಷದ ಹೈಕಮಾಂಡ್‌ಗೆ ಮುಜುಗರವನ್ನುಂಟು ಮಾಡುವಂತಹ ಹೇಳಿಕೆ ನೀಡಿದ್ದ ರಾಜಣ್ಣ ಅವರನ್ನು ಸೋಮವಾರ ಸಚಿವ ಸಂಪುಟದಿಂದ ವಜಾ ಮಾಡಲಾಗಿತ್ತು.
ಖುದ್ದು ರಾಹುಲ್ ಗಾಂಧಿ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂಬುದು ಬಹಿರಂಗವಾದ ನಂತರದಿಂದ ಕಾಂಗ್ರೆಸ್ ನಾಯಕರು ರಾಜಣ್ಣ ವಿಚಾರವಾಗಿ ಅನಗತ್ಯ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕದಂತೆ ನಡೆಯನ್ನಿಡುತ್ತಿದ್ದಾರೆ. ಬಹುತೇಕ ಎಲ್ಲ ಸಚಿವರು ಮಂಗಳವಾರ ರಾಜಣ್ಣ ಅವರನ್ನು ವಜಾಗೆ ನಿಖರ ಕಾರಣ ತಿಳಿದಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದಷ್ಟೇ ಹೇಳಿದ್ದಾರೆ.
ತೀವ್ರ ಅಸಮಾಧಾನ: ರಾಜಣ್ಣ ಅವರ ಹೇಳಿಕೆಯನ್ನು ಸದಾ ಸಮರ್ಥಿಸುತ್ತಿದ್ದ ಸಿದ್ದು ಬಣದ ಸಚಿವರಿಗೆ ಈ ಬೆಳವಣಿಗೆ ತೀವ್ರ ಅಸಮಾಧಾನ ತಂದಿದೆ. ರಾಜಣ್ಣ ಅವರ ಹೇಳಿಕೆಯ ಪೇಪರ್ ಕಟಿಂಗ್ ಗಳನ್ನು ಹೈಕಮಾಂಡ್‌ಗೆ ಕಳುಹಿಸಿ ಪ್ರೊಪಗಾಂಡ ಮಾಡಲಾಗಿದೆ ಎಂಬ ಬೇಸರವೂ ಇದೆ. ಆದರೆ, ಖುದ್ದು ರಾಹುಲ್ ಗಾಂಧಿ ಕೆಂಡಾಮಂಡಲಗೊಂಡಿರುವುದರಿಂದ ಬಹಿರಂಗವಾಗಿ ತಮ್ಮ ಭಾವನೆ ವ್ಯಕ್ತಪಡಿಸಲು ಎಲ್ಲರೂ ಹಿಂಜರಿಕೆ ಹೊಂದಿದ್ದಾರೆ.
ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿದ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹೇವಪ್ಪ, ಸೇರಿ ಇನ್ನಿತರ ಸಚಿವರು, ರಾಜಣ್ಣ ಅವರನ್ನು ವಜಾ ಮಾಡಿದ್ದಕ್ಕೆ ಕಾರಣ ತಿಳಿದಿಲ್ಲ. ನಮ್ಮದು ಶಿಸ್ತಿನ ಪಕ್ಷ, ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಅದನ್ನು ನಾವೆಲ್ಲ ಒಪ್ಪುತ್ತೇವೆ ಎಂದು ಹೇಳಿದ್ದಾರೆ.
ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜಣ್ಣ ಅವರ ವಿಚಾರ ಕುರಿತು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿ ಇರಬೇಕು. ಸಂಪುಟದಿಂದ ಬಿಟ್ಟಿದ್ದಕ್ಕೆ ರಾಜಣ್ಣ ಅವರಿಗೆ ಸಹಜವಾಗಿ ಅಸಮಧಾನವಿರುವುದು ಸಹಜ. ಅದನ್ನು ಬಿಟ್ಟು ಬೇರೆ ಏನೂ ನನಗೆ ತಿಳಿದಿಲ್ಲ ಎಂದರು.
ಡಾ.ಎಂ.ಸಿ.ಸುಧಾಕರ್ ಮಾತನಾಡಿ, ರಾಜಣ್ಣ ಯಾವ ವಿಚಾರವಾಗಿ ಹಿಂದೆ ಮಾತನಾಡಿದ್ದರೆಂದು ನನಗೆ ತಿಳಿದಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು. ಹೈಕಮಾಂಡ್ ತೀರ್ಮಾನಕ್ಕೆ ಗೌರವ ನೀಡುತ್ತೇನೆ. ತಪ್ಪಾಗಿ ಅರ್ಥೈಸಿದ್ದರೆ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತೇನೆ ಎಂದು ರಾಜಣ್ಣ ಅವರೇ ಹೇಳಿದ್ದಾರೆ. ಇನ್ನು, ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬ ಬಗ್ಗೆ ಅವರನ್ನೇ ಕೇಳಬೇಕು ಎಂದು ತಿಳಿಸಿದರು.
ಸ್ನೇಹಿತನಿಗೆ ಆಗಿದ್ದಕ್ಕೆ ಬೇಸರವಿದೆ: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿ, ರಾಜಣ್ಣ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡಲು ಆಗುವುದಿಲ್ಲ. ಅದು ಹೈಕಮಾಂಡ್ ಮತ್ತು ರಾಜಣ್ಣ ನಡುವೆ ಇರುವ ವಿಚಾರ. ಆದರೆ, ನನ್ನ ಸ್ನೇಹಿತನಿಗೆ ಹೀಗಾಗಿರೋದಕ್ಕೆ ಬೇಸರವಿದೆ. ಇನ್ನು, ವಜಾ ಮಾಡಿದ್ದು ಅವಮಾನ ಎಂದು ಹೇಳಲು ಇಷ್ಟಪಡುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ವರಿಷ್ಠರು ತೀರ್ಮಾನ ಮಾಡಿದ್ದು, ಅದನ್ನು ಪ್ರಶ್ನಿಸಲಾಗದು ಎಂದಿದ್ದಾರೆ.
ಡಿಸಿಎಂ ಬಾಯಿಗೆ ಬೀಗ: ರಾಜಣ್ಣ ವಿಚಾರದಲ್ಲಿ ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವಿಧಾನಸೌಧದಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ ಎಂದು ಸನ್ನೆ ಮೂಲಕ ತಿಳಿಸಿ ಹೊರಟರು.
ಸಿಎಂ ನೋ ರಿಯಾಕ್ಷನ್: ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ರಾಜಣ್ಣ ಅವರನ್ನು ಸಂಪುಟದಿಂದ ತೆಗೆದು ಹಾಕಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಂಗಳವಾರ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದವರು ಅಣಕಿಸಿದ ಕಾರಣಕ್ಕಾಗಿ ಸಿದ್ದರಾಮಯ್ಯ, ರಾಜಣ್ಣ ಅವರ ವಿಚಾರದಲ್ಲಿ ಯಾವುದೇ ಬೇಸರವಾಗಿಲ್ಲ ಎಂದಷ್ಟೇ ತಿಳಿಸಿದರು. ಉಳಿದಂತೆ ಮಾಧ್ಯಮಗಳೆದುರು ಆ ವಿಚಾರ ಮಾತನಾಡಿಲ್ಲ.
ಎಚ್ಚರಿಕೆಯಿಂದ ಇರಬೇಕಷ್ಟೇ: ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ಹೈಕಮಾಂಡ್ ನಿರ್ಧಾರ. ಯಾಕಾಗಿ ಮಾಡಲಾಗಿದೆ ಎಂದು ತಿಳಿದಿಲ್ಲ. ಹೈಕಮಾಂಡ್‌ಗಿರುವ ತಪ್ಪು ಗ್ರಹಿಕೆ ಸರಿಪಡಿಸಲು ದೆಹಲಿಗೆ ಹೋಗುವುದಾಗಿ ರಾಜಣ್ಣ ಹೇಳಿದ್ದಾರೆ. ಅವರೇ ರಾಜಣ್ಣ ಅವರಿಗೆ ಎಲ್ಲ ವಿಷಯ ತಿಳಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರಲ್ಲದೆ
ಎಲ್ಲವೂ ಸರಿ ಹೋಗಬಹುದು. ಜತೆಗೆ ಪಿತೂರಿ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಹೀಗೆ ಆಗುತ್ತದೆ ಎಂದರು.
ರಾಜಣ್ಣ ಅಭಿಮಾನಿಗಳ ಆತ್ಮಹತ್ಯೆ ಯತ್ನ: ಕೆ.ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಸ್ವಕ್ಷೇತ್ರ ಮಧುಗಿರಿಯಲ್ಲಿ ಮಂಗಳವಾರ ಬಂದ್ ಆಚರಿಸಲಾಯಿತು. ರಾಜಣ್ಣ ಅಭಿಮಾನಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅಭಿಮಾನಿಯೊಬ್ಬ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ಅಭಿಮಾನಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ನಡೆಯಿತು.
Leave feedback about this