ಚಿಕ್ಕಮಗಳೂರು:- ಮಡಬೂರು ರಾಜೇಂದ್ರರವರು ಶೋಷಿತರ, ದಲಿತರ, ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು. ಅಂತಹ ಧ್ವನಿ ಇಂದು ಇಲ್ಲವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ SC ST ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ಮತ್ತು ದಲಿತ ಮುಖಂಡ ಶೆಟ್ಟಿಕೊಪ್ಪ ಮಹೇಶ್ ಹೇಳಿದ್ದಾರೆ.
ಅವರು ಭಾನುವಾರ ಜಿಲ್ಲೆಯ ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮುಖಂಡರ ಸಹಯೋಗದಲ್ಲಿ ಇತ್ತೀಚಿಗೆ ನಿಧನರಾದ ಮುತ್ಸದ್ದಿ ನಾಯಕ, ಮಲೆನಾಡ ಮಾಣಿಕ್ಯ, ಮಡಬೂರು ಎಚ್ ಟಿ ರಾಜೇಂದ್ರಣ್ಣನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜೇಂದ್ರಣ್ಣ ಎಂದರೆ, ಅದೊಂದು ದೈತ್ಯ ಶಕ್ತಿ, ಇಂತಹ ಅದ್ಭುತ ಶಕ್ತಿ ಇಲ್ಲದೆ ಸಾಹಿತ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆ. ದಲಿತರ, ರೈತರ, ಹಿಂದುಳಿದ ವರ್ಗದವರ, ಕೂಲಿ ಕಾರ್ಮಿಕರ, ಬಡವರ ಧ್ವನಿಯಾಗಿದ್ದರು. ಆ ವರ್ಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿ ಮಾತನಾಡಿ ನ್ಯಾಯ ದೊರಕಿಸಿ ಕೊಡುತ್ತಿದ್ದರು. ಅಂತಹ ಧ್ವನಿ ಇಂದು ಇಲ್ಲವಾಗಿದೆ. ಆ ಧ್ವನಿಯಲ್ಲಿ ಸ್ವಾರ್ಥವಿಲ್ಲದೆ, ನಿಸ್ವಾರ್ಥ ಸೇವೆಯ ಪ್ರಾಮಾಣಿಕತೆಯ ಸತ್ಯದ ಧ್ವನಿಯಾಗಿತ್ತು, ಎಂದೂ ಪ್ರತಿಫಲ ಬಯಸದೆ ಸತ್ಯ ನಿಷ್ಠೆಯ ಧ್ವನಿಯಾಗಿತ್ತು ಅಂತಹ ಧ್ವನಿ ಇಂದು ಇಲ್ಲವಾಗಿದೆ. ರಾಜಕೀಯದಲ್ಲಿ ಅವರಿಗೆ ಅಧಿಕಾರಿಯುತವಾದ ಪ್ರಾತಿನಿಧ್ಯ ನೀಡಲು ಅವರು ನಂಬಿದ ಪಕ್ಷ ಅವರನ್ನ ಕಡೆಗಣಿಸಿತ್ತು. ಅಲ್ಲದೆ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಕ್ಷೇತ್ರದ ಜನ ಅವರನ್ನು ಕೈ ಹಿಡಿಯಲಿಲ್ಲ, ಅಪಾರಜ್ಞಾನ ಸಂಪತ್ತು ಇದ್ದರೂ ಕೂಡ ಅವರನ್ನು ಬಳಸಿಕೊಳ್ಳುವಲ್ಲಿ ಕ್ಷೇತ್ರದ ಜನ ವಿಫಲರಾಗಿದ್ದಾರೆ, ಮಾತ್ರವಲ್ಲ ರಾಜಕೀಯ ಪಕ್ಷ ಕೂಡ ಅವರಿಗೆ ಕೈ ಕೊಟ್ಟಿತ್ತು ಎಂದರು.
ಮೊದಲಿಗೆ ರಾಜೇಂದ್ರಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಎಸ್ಸಿ ಎಸ್ಟಿ ದೌರ್ಜನ್ಯ ಹಾಗೂ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ಶೆಟ್ಟಿಕೊಪ್ಪ ಮಹೇಶ್, ಕೊಪ್ಪದ ಎಪಿಎಂಸಿಯ ನಿರ್ದೇಶಕ ಎಚ್ ಎಂ ಶಿವಣ್ಣ, ಬೋವಿ ಸಮಾಜ ಪತ್ರಿಕೆಯ ಸಂಪಾದಕ ಚಿತ್ರಪ್ಪ ಹೊರಬಾಳ್, ಪಿಕ್ ಅಪ್ ಚಂದ್ರು, ವಾಲ್ಮೀಕಿ ಮಂಜುನಾಥ್, ಬಾಳೆಹೊನ್ನೂರಿನ ಬಾಬಣ್ಣ, ಬನ್ನೂರು ರಘು, ಗೂಬ್ಬೂರು ನಾಗಪ್ಪ, ಡಿ.ರಾಮು, ಮಹಿಳಾ ಮುಖಂಡರಾದ ಪವಿತ್ರ, ಆಶಾ, ಮೀನಾಕ್ಷಿ , ಮಂಜುಳಾ, ಪಾರ್ವತಿ, ಲಕ್ಷ್ಮಿ ಹಾಗೂ ವಿಶೇಷ ಅತಿಥಿಯಾಗಿ ಪತ್ರಕರ್ತ ಹಾತೂರ್ ಪ್ರಭಾಕರ್ ಉಪಸ್ಥಿತರಿದ್ದರು.
ದಲಿತ ಮುಖಂಡರೆಲ್ಲ ಒಗ್ಗೂಡಿ ನರಸಿಂಹರಾಜಪುರದ ಮಂಡಗದ್ದೆ ಸರ್ಕಲ್ ಗೆ ಅಥವಾ ಶಾರದಾ ವಿದ್ಯಾ ಮಂದಿರದ ಶಾಲೆಯ ರಸ್ತೆಗೆ, ದಿವಂಗತ ಎಚ್ ಟಿ ರಾಜೇಂದ್ರ ರವರ ಹೆಸರಿಡುವಂತೆ ಪಟ್ಟಣ ಪಂಚಾಯಿತಿಗೆ ಆಗ್ರಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
Leave feedback about this