ಬೆಂಗಳೂರು

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಪುನರ್ ಆಯ್ಕೆ ಶೀಘ್ರದಲ್ಲೇ ಅಧಿಕೃತ ಆದೇಶ

ಬೆಂಗಳೂರು:- ಹೊಸ ನೇಮಕಾತಿ ಮೂಲಕವೇ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.

ಪಂಚಾಯಿತಿ ಚುನಾವಣೆ ಸೇರಿದಂತೆ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಇದು ಮಹತ್ವದ ಸಂದೇಶವಾಗಲಿದೆ.

ಕಳೆದ ವಿಧಾನಸಭೆ ಚುನಾವಣೆ ನಂತರ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಿಯೋಜಿಸಲಾಗಿತ್ತು. ಅವರ ಅವಧಿಯಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗಿದೆ. ಈ ನಡುವೆ ದೇಶಾದ್ಯಂತ ಸಂಘಟನೆ ಪರ್ವದ ಭಾಗವಾಗಿ ಸಾಂಸ್ಥಿಕ ಚುನಾವಣೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿಯೂ ಬದಲಾವಣೆಯಾಗಬಹುದು ಎನ್ನಲಾಗಿತ್ತು. ಈ ಗೊಂದಲಗಳಿಗೆ ಬಿಜೆಪಿ ವರಿಷ್ಠರು ತೆರೆ ಎಳೆದಿದ್ದು, ವಿಜಯೇಂದ್ರ ಅವರನ್ನೇ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.