ಚಿಕ್ಕಮಗಳೂರು:- ಚಿಕ್ಕಮಗಳೂರಿನಿಂದ ತಿರುಪತಿಗೆ ಆರಂಭವಾಗುವ ರೈಲಿಗೆ ದತ್ತಪೀಠ ಎಕ್ಸ್‌ಪ್ರೆಸ್ ಅಥವಾ ದತ್ತಾತ್ರೇಯ ಎಕ್ಸ್‌ಪ್ರೆಸ್ ಹೆಸರು ನಿಗದಿ ಆಗುವುದು ಖಚಿತವಾಗುತ್ತಿದ್ದಂತೆ, ಇತ್ತ ಮುಸ್ಲಿಂ ಸಂಘಟನೆಗಳು, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ರೈಲಿಗೆ ಬಾಬಾ ಬುಡನ್ ಎಕ್ಸ್‌ಪ್ರೆಸ್ ಹೆಸರಿಡುವಂತೆ ಪಟ್ಟು ಹಿಡಿದಿದ್ದಾರೆ.
ಚಿಕ್ಕಮಗಳೂರಿಗೆ ಕಾಫಿಯನ್ನ ತಂದ ಸೂಫಿ ಸಂತ ಬಾಬಾ ಬುಡನ್ ಅವರ ಹೆಸರು ರೈಲಿಗೆ ಇಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಪತ್ರ ಬರೆದು ಸೊಶೀಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿದ್ದಾರೆ. ಇಂದು ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ಸಿದ್ದತೆ ನಡೆಸಿದೆ.
ರೈಲು ಚಿಕ್ಕಮಗಳೂರಿನಿಂದ ತಿರುಪತಿಗೆ ಓಡಾಟ ನಡೆಸುವ ಮುನ್ನವೇ ರೈಲಿಗೆ ಹೆಸರಿಡುವ ವಿಚಾರವಾಗಿ ಹಿಂದೂ, ಮುಸ್ಲಿಮರ ನಡುವೆ ವಿವಾದ ಸೃಷ್ಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೂ ತಲುಪಿದೆ. ರೈಲು ಹೆಸರಿಡುವ ವಿಚಾರವಾಗಿ ಸೃಷ್ಟಿಯಾಗಿರುವ ವಿವಾದ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕಿದೆ.