ಬೆಂಗಳೂರು:- ಮಾಜಿ ಸಚಿವ ಕೆ.ಎನ್ ರಾಜಣ್ಣ ಬೆಂಬಲಿಗರು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಸ್ಫೋಟಕ ಆರೋಪ ಮಾಡಿದ್ದು, ಈ ವಿಚಾರ ರಾಷ್ಟ್ರವ್ಯಾಪಿ ರಾಜಕೀಯವಾಗಿ ಕಿಡಿ ಹೊತ್ತಿಸಿದೆ. ಆದರೆ, ಕರ್ನಾಟಕದಲ್ಲಿ ಇದೇ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾದಂತಿದೆ. ಸದ್ಯ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಣ್ಣ ಸಂಪುಟದಿಂದ ವಜಾಗೊಂಡಿರುವ ವಿಚಾರ ಕೋಲಾಹಲ ಸೃಷ್ಟಿಸಿದೆ.
ರಾಹುಲ್ ಗಾಂಧಿ ಆರೋಪದ ಬಳಿಕ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಿಗೆ ಮುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಚುನಾವಣೆಯ ಮತದಾನದಲ್ಲಿ ಯಾವುದೇ ಲೋಪವಾಗಿದ್ದಲ್ಲಿ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವಿಚಾರವನ್ನು ಮಾಜಿ ಸಚಿವ ಕೆ.ಎನ್ ರಾಜಣ್ಣ ಪರೋಕ್ಷವಾಗಿ ಒಪ್ಪಿಕೊಂಡ ಕಾರಣ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ.
ಈ ಬೆಳವಣಿಗೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಗೋಚರಿಸುತ್ತಿವೆ. ವಾಲ್ಮೀಕಿ ಸಮುದಾಯದ ನಾಯಕ ಮತ್ತು ಸಿಎಂ ಪರಮಾಪ್ತ ಆಗಿರುವ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ಬೆನ್ನಲ್ಲೇ ವಾಲ್ಮೀಕಿ ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ವಾಲ್ಮೀಕಿ ಸಮಾಜದ 14 ಜನ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆಯಂತೆ. ರಾಜಣ್ಣ ಅವರನ್ನು ವಜಾಮಾಡಿರುವ ಆದೇಶವನ್ನು ವಾಪಸ್ ಪಡೆಯದಿದ್ದಲ್ಲಿ ಈ ಸರ್ಕಾರವೇ ಪತನವಾಗಲಿದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆಗೆ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ತೀವ್ರ ಮಟ್ಟದ ಹೋರಾಟ ಇಂದು ತುಮಕೂರಿನಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಮೇಯರ್ ಕೃಷ್ಣಪ್ಪ, ಸರ್ಕಾರಕ್ಕೆ ಇದು ನೇರ ಎಚ್ಚರಿಕೆ ಎಂದಿದ್ದು, ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ನಿರ್ಧಾರ ಕೂಡಲೇ ಹೈಕಮಾಂಡ್ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರ ಸಭೆ ನಡೆಸಿದ್ದು, ಶೀಘ್ರದಲ್ಲೇ ನಮ್ಮ ನಿಲುವು ಸ್ಪಷ್ಟಪಡಿಸಲಿದ್ದೇವೆ ಎಂದೂ ವಾರ್ನಿಂಗ್ ಮಾಡಿದ್ದಾರೆ.
ಒಂದುವೇಳೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ನಿರ್ಧಾರವನ್ನು ಬದಲಾಯಿಸದಿದ್ದ ವಾಲ್ಮೀಕಿ ಸಮಾಜದ ಎಲ್ಲಾ 14 ನಾಯಕರು ರಾಜೀನಾಮೆ ನೀಡಲು ತಾಕೀತು ಮಾಡಲಾಗುತ್ತದೆ. ನಮ್ಮ ಸಮುದಾಯದ ನಾಯಕರು ರಾಜೀನಾಮೆ ನೀಡಿದರೆ, ಸರ್ಕಾರ ಉಳಿಯಲ್ಲ. ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಎಲ್ಲಾ ಶಾಸಕರ ಜೊತೆ ಮಾತುಕತೆ ನಡೆದಿದೆ. ಸ್ವಾಮೀಜಿಗಳು ಹಾಗೂ ಸತೀಶ್ ಜಾರಕಿಹೊಳಿ ಏನು ನಿರ್ಧಾರ ಕೈಗೊಳ್ಳಲಿದ್ದರೋ ಅದಕ್ಕೆ ಅನುಗುಣವಾಗಿ ಸಮುದಾಯದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
Leave feedback about this