ದೆಹಲಿ:- ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯನ್ನೇ ಪ್ರಕಟಿಸಿದರೂ ಪಕ್ಷದಲ್ಲೇ ತೀವ್ರ ಆಕ್ಷೇಪ, ಅಸಮಾಧಾನ ಉಂಟಾಗಿರುವುದರಿಂದ ತಡೆ ಹಿಡಿಯಲಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ದೆಹಲಿಯಲ್ಲಿ ಇಂದು ಹೈಕಮಾಂಡ್ ನಾಯಕರು ಚರ್ಚಿಸಲಿದ್ದು, ಅಸಮಾಧಾನ ಸರಿಪಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ರಾಜ್ಯ ನಾಯಕರು, ಕಾರ್ಯಕರ್ತರಿಂದ ತೀವ್ರ ಆಕ್ಷೇಪಣೆ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತಾನೇ ಅಂತಿಮಗೊಳಿಸಿ ಕಳುಹಿಸಿದ್ದ ವಿಧಾನ ಪರಿಷತ್‌ನ 4 ನಾಮನಿರ್ದೇಶಿತ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಗೆ ತಡೆ ನೀಡಿದೆ.
ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ರಾಜ್ಯ ನಾಯಕತ್ವ ಶಿಫಾರಸು ಮಾಡಿದ ಪಟ್ಟಿಯಲ್ಲಿ ದಿನೇಶ್ ಅಮಿನ್‌ಮಟ್ಟು, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಡಿ.ಜಿ.ಸಾಗರ್ ಅವರ ಹೆಸರುಗಳನ್ನು ಹೈಕಮಾಂಡ್ ಕಳೆದ ವಾರ ಅಂತಿಮಗೊಳಿಸಿತ್ತು. ಈ ಪಟ್ಟಿಯನ್ನು ರಾಜ ಭವನಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಸಜ್ಜಾಗಿತ್ತು.
ಈ ನಡುವೆ ಹೈಕಮಾಂಡ್ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ ರಾಜ್ಯ ನಾಯಕರ ಶಿಫಾರಸುಗಳಿಗೆ ಮನ್ನಣೆ ದೊರಕಿರಲಿಲ್ಲ. ಅಲ್ಲದೆ, ಪಕ್ಷದ ಕಾರ್ಯಕರ್ತರಿಗೂ ಅವಕಾಶ ದೊರಕಿಲ್ಲ ಎಂದು ಕಾರ್ಯಕರ್ತರು ಹಾಗೂ ನಾಯಕರಿಂದ ತೀವ್ರ ಆಕ್ಷೇಪಣೆ ಕೇಳಿ ಬಂತು. ರಾಜ್ಯದ ಪ್ರಭಾವಿ ನಾಯಕರು ಹೈಕಮಾಂಡ್ ನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತಾನೇ ಒಪ್ಪಿಗೆ ನೀಡಿದ್ದ ಪಟ್ಟಿಗೆ ಇದೀಗ ತಡೆ ನೀಡಿದೆ.
ಮೂಲಗಳ ಪ್ರಕಾರ ಮಂಗಳವಾರವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ದೆಹಲಿಯಲ್ಲಿ ಹೈಕಮಾಂಡ್ ಮಹತ್ವದ ಸಭೆಯೊಂದನ್ನು ನಡೆಸಲಿದ್ದು, ಈ ವೇಳೆ ವಿಧಾನ ಪರಿಷತ್ ನಾಮನಿರ್ದೇಶನ ವಿಚಾರವೂ ಚರ್ಚೆಗೆ ಬರಲಿದೆ ಎಂದು ಮೂಲಗಳು ಹೇಳಿವೆ.