ಚಿಕ್ಕಮಗಳೂರು

ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ.- ಡಾ.ಅಂಶುಮಂತ್ ಗೌಡ

ಚಿಕ್ಕಮಗಳೂರು:- ಕುಡಿಯುವ ನೀರಿನ ಯೋಜನೆಗಾಗಿ ಶಾಸಕರು ಹಣ ಮಂಜೂರು ಮಾಡಿದ್ದಾರೆ. ಆದರೆ, ಕಾಮಗಾರಿ ವಿಳಂಬವಾಗಿರುವುದರಿಂದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಕಾಮಗಾರಿಯ ವಿಳಂಬಕ್ಕೆ ಏನು ತಾಂತ್ರಿಕ ಸಮಸ್ಯೆ ಏನಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು, ಇಂಜಿನಿಯರ್ ವಿವರಣೆ ನೀಡಬೇಕು. ಎಷ್ಟು ಬೋರವೆಲ್ ಕೊರೆಯಲಾಗಿದೆ. ಕುಡಿಯುವ ನೀರಿನ ಪೈಪ್ ಲೈನ್ ಎಷ್ಟಾಗಿದೆ, ಎಲ್ಲಾ ವಿವರಣೆ ನೀಡಬೇಕು ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ಅವರು ಇಂದು ನ.ರಾ.ಪುರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಶಾಸಕರಾದ ಟಿ.ಡಿ.ರಾಜೇಗೌಡರು ರಸ್ತೆ ಗುಂಡಿ ಮುಚ್ಚಲು 70 ಕೋಟಿ ರೂಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆದರೆ, ಗುಂಡಿ ಮುಚ್ಚುವ ಕಾಮಗಾರಿ ಸರಿಯಾಗಿಲ್ಲದೆ ಮತ್ತೆ ಗುಂಡಿ ಬಿದ್ದಿದೆ. ಮಡಬೂರು ಸಮೀಪದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಅಪಘಾತವಾಗಿ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಜೀವಕ್ಕೆ ಬೆಲೆ ಇಲ್ಲವೇ? ಅಧಿಕಾರಿಗಳು, ಗುತ್ತಿಗೆದಾರರಿಂದ ಶಾಸಕರಿಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿನ ಬಗ್ಗೆ ಸಭೆ ಕರೆಯುತ್ತೇನೆ. ಆಗ ಸಭೆಗೆ ಎಲ್ಲಾ ಮಾಹಿತಿ ನೀಡಬೇಕು. ಕಳಪೆ ಕಾಮಗಾರಿಯಾಗಿದ್ದರೆ ಅಂತಹ ಗುತ್ತಿಗೆದಾರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಎಂದು ಖಾರವಾಗಿ ಹೇಳಿದರು.
ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರಸ್ತೆಯ ಗುಂಡಿ ಮುಚ್ಚಲು ನಾನು ಸಾಕಷ್ಟು ಅನುದಾನ ನೀಡಿದ್ದೆ. ಆದರೆ, ಮಳೆಗಾಲ ಬರುತ್ತಿದ್ದಂತೆ ಮತ್ತೆ ಗುಂಡಿಗಳಾಗಿದೆ. ನಿಮ್ಮ ಇಲಾಖೆಯ ಬೇಜವಬ್ದಾರಿಯಿಂದ ನಾನು ಜನರಿಂದ ಕೆಟ್ಟ ಮಾತು ಕೇಳಬೇಕಾಗಿದೆ. ಮಳೆಗಾಲ ಶುರುವಾಗುವ ಮುನ್ನ ಉತ್ತಮ ಗುಣಮಟ್ಟದಲ್ಲಿ ಗುಂಡಿ ಮುಚ್ಚಬೇಕಾಗಿತ್ತು ಎಂದರು.