ಮಂಗಳೂರು:- ಧರ್ಮಸ್ಥಳದ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಸತತ 2 ನೇ ದಿನವೂ ಶವಗಳ ಹುಡುಕಾಟ ಮುಂದುವರಿದಿದೆ.
ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಅನಾಮಿಕ ದೂರುದಾರ, 13 ಸ್ಥಳಗಳನ್ನು ಗುರುತಿಸಿದ ಬೆನ್ನಲ್ಲೇ ಮಂಗಳವಾರದಿಂದ ಶವಗಳನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿದ್ದು ಎಸ್‌ಐಟಿ ಅಧಿಕಾರಿಗಳ ನೇತ್ರಾವತಿ ದಂಡೆಯ ಆಸುಪಾಸಿನಲ್ಲಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ. ಮಂಗಳವಾರ ಸುಮಾರು 6 ತಾಸಿಗೂ ಹೆಚ್ಚು ಕಾಲ ಅಗೆದರೂ ಯಾವುದೇ ರೀತಿಯ ಕುರುಹು ಪತ್ತೆಯಾಗಿಲ್ಲ. ಈ ಬೆನ್ನಲ್ಲೇ ಇವತ್ತು ಅನಾಮಿಕ ತೋರಿಸಿದ 2ನೇ ಜಾಗದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಾಡು ಸಂರಕ್ಷಿತಾ ಪ್ರದೇಶ ಆಗಿರೋದ್ರಿಂದ ಭೂಮಿ ಅಗೆಯೋಕೆ ಅವಕಾಶ ಇಲ್ಲ. ಹೀಗಾಗಿ ಮಾನವನ ಶ್ರಮದಿಂದಲೇ ಭೂಮಿ ಅಗೆದು ತನಿಖೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆ ನೋಡಲು ನೂರಾರು ಗ್ರಾಮಸ್ಥರು, ಯಾತ್ರಾರ್ಥಿಗಳು ಆಗಮಿಸಿದ್ದರು. ಆದರೆ, ಅಗೆತದ ಸನಿಹಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ. ದೂರುದಾರ ಮುಸುಕು ಹಾಕಿಕೊಂಡೇ ಇದ್ದು, ಆತನನ್ನು ನೋಡಲು ಜನ ಸೇರಿದ್ದಾರೆ.
ದೂರುದಾರ ನೇತ್ರಾವತಿ ಸ್ನಾನಘಟ್ಟ ಪ್ರದೇಶದಲ್ಲಿ 8 ಸ್ಥಳ, ಅಜಿಕುರಿ ರಸ್ತೆಯಲ್ಲಿ, ಕನ್ಯಾಡಿ, ನೇತ್ರಾವತಿ ನದಿ ಕಿನಾರೆ ಸೇರಿ ಒಟ್ಟು 13 ಸ್ಥಳಗಳನ್ನು ಶವ ಹೂತ ಜಾಗವಾಗಿ ಸೋಮವಾರ ಗುರುತಿಸಿದ್ದಾನೆ. ಈ ಸ್ಥಳಗಳಲ್ಲಿ ಕಾರ್ಕಳ ಎಎನ್‌ಎಫ್‌ನ 30 ಸಿಬ್ಬಂದಿ ಸಶಸ್ತ್ರಧಾರಿಗಳಾಗಿ ರಾತ್ರಿ-ಹಗಲು ಪಾಳಿಯಲ್ಲಿ ಬಂದೋಬಸ್ತ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಿನ್ನೆ 12 ಮಂದಿ ಕೂಲಿ ಆಳುಗಳನ್ನು ಕರೆಸಲಾಗಿತ್ತು. ಇವತ್ತು ಹೆಚ್ಚುವರಿ ಮಂದಿಯನ್ನ ಕರೆತರಲು ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದ ಹನ್ನೆರಡು ಕಡೆ ಉತ್ಖನನ ಮಾರ್ಕಿಂಗ್ ಮಾಡಲಾಗಿದ್ದು, ಒಂದಾದ ಬಳಿಕ ಇನ್ನೊಂದು ಕಡೆ ಗುಂಡಿಗಳನ್ನು ಅಗೆದು ತನಿಖೆ ನಡೆಯಲಿದೆ.
ಧರ್ಮಸ್ಥಳ ನಿಗೂಢ ಹತ್ಯೆಕೇಸ್ ಸಂಬಂಧ SIT ತನಿಖೆ ಚುರುಕುಗೊಳಿಸಿದೆ. ಶ್ರೀ ಕ್ಷೇತ್ರದಲ್ಲಿ ಐಪಿಎಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು ಹಲವರ ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ SIT ತನಿಖಾ ತಂಡದಲ್ಲಿರೋ ಹಿರಿಯ ಅಧಿಕಾರಿಯ ನೇಮಕಕ್ಕೆ ಅಪಸ್ವರ ಕೇಳಿ ಬಂದಿದೆ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಮುಖ್ಯಸ್ಥರನ್ನಾಗಿ ಪ್ರಣವ್ ಮೊಹಂತಿ ಅವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣವ್ ಮೊಹಂತಿ ಅವರು ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಮೊಹಂತಿ ನೇಮಕದಲ್ಲಿ ಕೆ.ಜೆ.ಜಾರ್ಜ್ ಕೈವಾಡವಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮೊಹಂತಿ ನೇಮಕದಿಂದ ಪೊಲೀಸರ ನೈತಿಕ ಬಲ ಕುಗ್ಗಿದೆ ಎಂದು ಆರೋಪಿಸಿದರು.
ಡಿವೈಎಸ್ ಪಿ ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವಾಗ ಕೆ.ಜೆ.ಜಾರ್ಜ್ ಜತೆ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಮತ್ತು ಪ್ರಣವ್ ಮೊಹಂತಿಯವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು ಎಂದು ಅನುಪಮಾ ಶೆಣೈ ಹೇಳಿದರು. ದಯಾನಂದ ಅಥವಾ ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ತನಿಖಾ ತಂಡದ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಶೆಣೈ ಆಗ್ರಹಿಸಿದರು.
Leave feedback about this