ಬೆಂಗಳೂರು:- ಆನ್ ಲೈನ್ ಹಾಗೂ ಆಪ್ ಲೈನ್ ಗ್ಯಾಬ್ಲಿಂಗ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಂತ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಕೋರ್ಟ್ ಗೆ ಹಾಜರು ಪಡಿಸಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, ಮತ್ತೆ 6 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಇಡಿ ಅಧಿಕಾರಿಗಳಿಂದ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿಸಲಾಗಿತ್ತು. ಬಂಧಿತ ಆರೋಪಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ಇಡಿ ಅಧಿಕಾರಿಗಳು ಹಾಜರುಪಡಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಜನಪ್ರತಿನಿಧಿಗಳ ನ್ಯಾಯಾಲಯವು ಬಂಧಿಸುವಾಗ ಆರೋಪಿ ವಿರುದ್ಧ ಯಾವ ಕೇಸ್ ಗಳನ್ನ ಉಲ್ಲೇಖಿಸಿದ್ದೀರಿ? ಎಂಬುದಾಗಿ ಇಡಿ ಅಧಿಕಾರಿಗಳಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.
2011ರ ಕೇಸ್ ರದ್ದಾಗಿದೆ. 2016ರ ಸಿಬಿಐ ಕೇಸ್ ಸಹ ಕ್ಲೋಸ್ ಆಗಿದೆ. ಯಾವ ಪ್ರಕರಣ ಆಧರಿಸಿ ಇಸಿಐಆರ್ ದಾಖಲಿಸಿದ್ದೀರಿ ಎಂಬುದಾಗಿ ಇಡಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಮೂರ್ತಿಗಳು ಕೇಳಿದರು. ಈ ವೇಳೆ ಮಾತನಾಡಲು ಮುಂದಾದ ಇಡಿ ಅಧಿಕಾರಿಗೆ ಜಡ್ಜ್ ತರಾಟೆಗೆ ತೆಗೆದುಕೊಂಡರು.
ಆರೋಪಿ ಬಂಧನ ನಂತ್ರ ಯಾವುದೋ ಕೇಸ್ ಗಳನ್ನು ಉಲ್ಲೇಖಿಸುತ್ತಿದ್ದೀರಿ. ಯಾವ ಪ್ರಕರಣಗಳ ಆಧರಿಸಿ ಇಡಿ ಇಸಿಐಆರ್ ದಾಖಲಿಸಿದೆ.? ಎಂದು ಜಡ್ಜ್ ಪ್ರಶ್ನೆ ಮಾಡಿದರು. ಆಗ ಇಡಿ ಎಸ್ ಪಿಪಿ ಪ್ರಮೋದ್ ಚಂದ್ರ ಅವರು ಕೆಲ ಕೇಸ್ ಗಳ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಯಾವ ಕೇಸ್ ಆಧಾರದಲ್ಲಿ ಬಂಧನ ಮಾಡಲಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಗ್ರೌಂಡ್ಸ್ ಆಫ್ ಅರೆಸ್ಟ್ ತೋರಿಸಿರುವ ಯಾವ ಕೇಸ್ ಅಸ್ತಿತ್ವದಲ್ಲಿಲ್ಲ. ಕೋರ್ಟ್ ಗಳನ್ನು ಏಕೆ ಮಿಸ್ ಲೀಡ್ ಮಾಡುತ್ತಿದ್ದೀರಿ ಎಂಬುದಾಗಿ ನ್ಯಾಯಾಧೀಶರು ಕೇಳಿದರು.
ಶಾಸಕ ವೀರೇಂದ್ರ ಪಪ್ಪಿ ಪರವಾಗಿ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿ ಸಿಕ್ಕೀಂನಲ್ಲಿ ಬಂಧಿಸಿ, ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಿದ್ದಾರೆ. ಗ್ಯಾಂಗ್ಟಾಕ್ ನ ರಮಡಾ ಹೋಟೆಲ್ ನಲ್ಲಿ ವೀರೇಂದ್ರ ಪಪ್ಪಿ ಬಂಧಿಸಲಾಗಿದೆ. ಆದರೇ ಯಾವ ಕೇಸ್ ಆಧರಿಸಿ ಇಡಿ ತನಿಖೆ ಆರಂಭಿಸಿದೆ ಎಂದು ತಿಳಿಸಿಲ್ಲ ಎಂದರು.
ವಾದ, ಪ್ರತಿವಾದವನ್ನು ಆಲಿಸಿದಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಮತ್ತೆ 6 ದಿನಗಳ ಕಾಲ ಇಡಿ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಅಲ್ಲದೇ ನಿದ್ದೆಗೆ ಸಮಯ ನೀಡಬೇಕು. ಮೂಲಸೌಕರ್ಯ ಒದಗಿಸಲು ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರು, ಔಷಧ, ವಿಶ್ರಾಂತಿಗೆ ಅವಕಾಶ ನೀಡಬೇಕು. ಪ್ರತಿದಿನ 30 ನಿಮಿಷ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಸೂಚಿಸಲಾಗಿದೆ.
Leave feedback about this