ವಿಜಯಪುರ

ಶಾಸಕ ವಿಜಯಾನಂದ ವಿರುದ್ಧ ಶಾಸಕ ಯತ್ನಾಳ್ ಕಿಡಿ

ವಿಜಯಪುರ:- ಇಲ್ಲಿನ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ ಜಡಿದು ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮಠದಿಂದ ಹೊರಹಾಕಿ ಅವರ ಸ್ಥಾನಕ್ಕೆ ಪರ್ಯಾಯ ಸ್ವಾಮೀಜಿ ನೇಮಕ ಮಾಡುವ ಬದಲು, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರೇ ಸ್ವಾಮೀಜಿ ಆಗಲಿ ಎಂದು ಶಾಸಕ ಯತ್ನಾಳ್ ವಿಜಯಾನಂದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಸುಮ್ಮನೆ ಈ ರೀತಿ ಪರ್ಯಾಯ ಪೀಠ, ಮಠಗಳು ಮಾಡುವುದರಿಂದ ಮಠದ ಭಕ್ತರಿಗೆ, ಸಮಾಜಕ್ಕೆ ತೊಂದರೆಯಾಗುತ್ತದೆ, ಆ ಮಠಕ್ಕೆ ಹೋದರೆ ಈ ಮಠದವರಿಗೆ ಬೇಸರ, ಈ ಮಠಕ್ಕೆ ಹೋದರೆ ಆ ಮಠದವರಿಗೆ ಬೇಸರ ಎಂದಿದ್ದಾರೆ. ಇದೇ ರೀತಿ ಈ ಹಿಂದೆ ಕೂಡಲಸಂಗಮ ಪೀಠಕ್ಕೆ ಪರ್ಯಾಯವಾಗಿ ಜಮಖಂಡಿ ತಾಲ್ಲೂಕಿನಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಮಾಡಿದ್ದಾರೆ, ಸಾಲದ್ದಕ್ಕೆ ಅಲ್ಲೊಂದು ಸ್ವಾಮೀಜಿಯನ್ನು ಕೂರಿಸಿದ್ದಾರೆ. ಆದರೆ, ಇದರಿಂದ ಆಗಿರುವ ಉಪಯೋಗವೇನು. ಸಮಾಜದಲ್ಲಿ ಏನಾದರೂ ರಕ್ತಕ್ರಾಂತಿ ಆಗಿದೆಯಾ, ರಕ್ತದ ಹೊಳೆ ಹರಿದಿದೆಯಾ ಎಂದು ಯತ್ನಾಳ್ ಟೀಕಿಸಿದ್ದಾರೆ.

ಇನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೊಲೆ ಸಂಚಿಗೆ ಸಂಬಂಧಪಟ್ಟಂತೆ ಮಾತನಾಡಿದ ಯತ್ನಾಳ್, ಸ್ವಾಮೀಜಿಗೆ ಆಹಾರದಲ್ಲಿ ವಿಷ ಹಾಕಲಾಗಿದೆ ಎಂಬ ಶಾಸಕ ಅರವಿಂದ ಬೆಲ್ಲದ ಅವರ ಈ ಗಂಭೀರ ಆರೋಪದ ಬಗ್ಗೆ ತಮಗೇನು ಗೊತ್ತಿಲ್ಲ, ಸ್ವಾಮೀಜಿ ಹತ್ಯೆಯ ಸಂಚಿನ ಬಗ್ಗೆ ನನಗೆ ಏನೂ ತಿಳಿದಿಲ್ಲ. ಈ ಬಗ್ಗೆ ನಾವು ಅವರನ್ನೇ ಕೇಳಬೇಕು ಎಂದಿದ್ದಾರೆ.

ಇನ್ನು ಇದುವರೆಗೂ ಕೂಡ ನಾನು ಯಾವುದೇ ಸ್ವಾಮೀಜಿ ಅಥವಾ ಜಗದ್ಗುರಗಳಿಂದ ಯಾವುದೇ ರೀತಿಯ ಪ್ರಯೋಜನಗಳನ್ನು ಪಡೆದಿಲ್ಲ, ಅಥವಾ ನನ್ನನ್ನು ನನ್ನ ಮಂತ್ರಿ ಮಾಡಿಸಿ ಎಂದು ₹11 ಲಕ್ಷ ಕಾಣಿಕೆ ಇಟ್ಟು ಯಾವ ಸ್ವಾಮೀಜಿಯ ಪಾದಪೂಜೆಯನ್ನೂ ಮಾಡಿಲ್ಲ. ಇದುವರೆಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೊರತು ಯಾವ ಸ್ವಾಮೀಜಿಗಳ ಕಾಲಿಗೂ ಇನ್ನೂ ಬಿದ್ದಿಲ್ಲ ಎಂದು ಹೇಳಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video