ಉಡುಪಿ:- ಜಿಲ್ಲೆಯ ಕಾರ್ಕಳ ಕ್ಷೇತ್ರದ ಶಾಸಕರು ತಮ್ಮ ತಂದೆಯವರನ್ನು ನಿನ್ನೆಯಷ್ಟೇ ಅಗಲಿದ್ದಾರೆ.
ತಮ್ಮ ತಂದೆ ಎಂ.ಕೆ ವಾಸುದೇವ್ ಬಗ್ಗೆ ಸುನಿಲ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಅವರ ಈ ಪತ್ರದಲ್ಲಿ ಅಪ್ಪನ ಬಗೆಗಿನ ಅವರ ಭಾವನೆ, ಪ್ರೀತಿ, ಗೌರವ ಎಲ್ಲವೂ ಅಡಕವಾಗಿದೆ. ಈ ಭಾವುಕ ಪತ್ರವನ್ನು ತನ್ನ ಅಕ್ಷರ ಕುಂಚದಲ್ಲಿ ಹೇಗಿದೆ ನೋಡೋಣ.
ಅಪ್ಪ…! ಅವರಿನ್ನು ನನಗೆ ನೆನಪು ಮಾತ್ರ. ಅಪ್ಪ ನನಗೆ ಕೊಟ್ಟಿದ್ದೇನು? ಅವರು ನನಗೆ ಎಲ್ಲವನ್ನೂ ಕೊಟ್ಟರು. ಅವರು ಶಿಕ್ಷಣವನ್ನು ಕೊಟ್ಟರು, ಸಂಸ್ಕಾರವನ್ನು ಕೊಟ್ಟರು, ಬದುಕಿಗೊಂದು ಆದರ್ಶವನ್ನು ಕೊಟ್ಟರು. ಅವರ ಮಿತಿಯಲ್ಲಿ ನನಗೆ ಏನನ್ನೂ ಕಡಿಮೆಮಾಡಿಲ್ಲ ಇಲ್ಲ. ನನಗಿನ್ನೂ ನೆನಪಿದೆ, ಆ ಕ್ಷಣ ಕಣ್ಣಿಗೆ ಕಟ್ಟಿದಂತೆ ಇದೆ.
ನಾವು ಚಿಕ್ಕಮಗಳೂರಿನಲ್ಲಿ ಇದ್ದಾಗ ಅವರು ನನ್ನ ಕೈ ಹಿಡಿದು ಸಂಘದ ಶಾಖೆಗೆ ಕರೆದುಕೊಂಡು ಹೋಗಿ ಸಂಸ್ಕಾರದ ಜತೆಗೆ ಮಹಾಪುರುಷರ ಕತೆಗಳನ್ನು ಹೇಳಿ ಬದುಕಿಗೆ ಪ್ರೇರಣೆಯಾದರು. ಅವರೆಂದು ಕುಟುಂಬಕ್ಕಾಗಿ ಬದುಕಲಿಲ್ಲ, ಎಲ್ಲವೂ ಸಮಾಜಕ್ಕಾಗಿ ಎಂಬುದು ಅವರ ಧ್ಯೇಯವಾಗಿತ್ತು.
ಶಾಲಾ-ಕಾಲೇಜು ದಿನಗಳಲ್ಲಿ ಎಷ್ಟು ಅಂಕಗಳಿಸಿದೆ ಎಂದು ಅವರು ನನ್ನನ್ನು ಪ್ರಶ್ನಿಸಲೇ ಇಲ್ಲ. ಆದರೆ, ಹೇಗೆ ಬದುಕುತ್ತಿದ್ದೀಯಾ? ಎಂದಷ್ಟೇ ಕೇಳುತ್ತಿದ್ದರು. ಎಲ್ಲರಂತೆ ನನ್ನಪ್ಪ ಆಗಾಗ ನನ್ನನ್ನು ಸೈಕಲ್ ನಲ್ಲಿ ಶಾಲೆಯ ಗೇಟ್ ವರೆಗೂ ಕರೆದೊಯ್ದು ಬಿಡುತ್ತಿದ್ದರು. ನಾಲ್ಕು ಹೆಜ್ಜೆ ಮುಂದೆ ಹೋಗಿ ನಾನು ಅಪ್ಪನತ್ತ ತಿರುಗಿ ನೋಡುವಾಗ ಪ್ರೀತಿಯಿಂದ ಇಪ್ಪತೈದು ಪೈಸೆ ಕೊಡುತ್ತಿದ್ದರು. ಆ ಕ್ಷಣ ನನಗೆ ಸ್ವರ್ಗ. ನನ್ನಪ್ಪ ಕೊಡುತ್ತಿದ್ದ ಆ ಇಪ್ಪತೈದು ಪೈಸೆಯೇ ನನ್ನ ಜೀವನದ ಬಹುಮೌಲ್ಯದ ಗಳಿಕೆಯೆಂದು ನಾನು ಈ ಕ್ಷಣವೂ ಭಾವಿಸುತ್ತೇನೆ.
ಎಂದಿಗೂ ತಲೆ ತಗ್ಗಿಸಿ ಬದುಕಬೇಡ ಎಂದು ಎಳವೆಯಿಂದಲೇ ನನಗೆ ಪದೇ ಪದೇ ಹೇಳುತ್ತಿದ್ದರು. ಇಂದೇನಾದರೂ ನಾನು ಸಾರ್ವಜನಿಕ ಜೀವನದಲ್ಲಿ ವಿಶ್ವಾಸದಿಂದ, ಧೈರ್ಯದಿಂದ ಕೆಲಸ ಮಾಡುತ್ತಿದ್ದೇನೆ ಎಂದರೆ ಅದು ಅವರ ಈ ಪ್ರೇರಣಾ ನುಡಿಗಳಿಂದಲೇ ಎಂದು ಯಾವ ಅಳುಕು ಇಲ್ಲದೇ ಹೇಳಬಲ್ಲೆ.
ಅವರು ತೋರಿಸಿದ ಹಾದಿಯಲ್ಲಿ ನೆಡೆದು ನಾನು ಜನಪರ ಹೋರಾಟಕ್ಕೆ ಇಳಿದೆ, ಜೈಲು ಸೇರಿದೆ. ನಾನು ಮೊದಲ ಬಾರಿಗೆ ಜೈಲಿಗೆ ಹೋದಾಗ ಸಹಜವಾಗಿ ನಾನು ತುಸು ಕುಗ್ಗಿ ಹೋಗಿದ್ದೆ. ಆದರೆ, ಸಂಜೀವಿನಿಯಾಗಿ ನನ್ನ ಅಪ್ಪ ಊಟ ತೆಗೆದುಕೊಂಡು ಬಂದಿದ್ದರು. ಹೆದರಬೇಡ ನೀನೇನು ತಪ್ಪು ಮಾಡಿ ಜೈಲಿಗೆ ಹೋಗಿಲ್ಲ. ಅನ್ಯಾಯದ ವಿರುದ್ಧ, ಸಿದ್ಧಾಂತಕ್ಕಾಗಿ ಹೋರಾಡಿದ್ದೀಯಾ. ಪ್ರಕರಣವನ್ನು ನಾನು ನೀನು ಸೇರಿ ಧೈರ್ಯವಾಗಿ ಎದುರಿಸೋಣ ಎಂದು ಹುಮ್ಮಸ್ಸು ತುಂಬಿದ್ದರು.ಅವರ ಈ ಪ್ರೇರಣೆಯ ಮಾತೇ ನನಗೆ ವರವಾಯ್ತು. ಅದಿಲ್ಲದೇ ಹೋಗಿದ್ದರೆ ನನ್ನ ಸಾರ್ವಜನಿಕ ಹೋರಾಟದ ಬದುಕೇ ಮಸುಕಾಗಿ ಹೋಗುತ್ತಿತ್ತು. ಈ ಕಾರಣಕ್ಕಾಗಿಯೇ ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನಾನು ವಾಸುದೇವ ಸುನೀಲ್ ಕುಮಾರ್ ಎಂದು ಅಪ್ಪನ ಹೆಸರಿನಲ್ಲಿ ಹೆಮ್ಮೆಯಿಂದ ಅಧಿಕಾರ ಸ್ವೀಕರಿಸಿದೆ.
ಈಗ ನಾನು ಚೆನ್ನಾಗಿ ಭಾಷಣ ಮಾಡುತ್ತೇನೆ ಎಂಬ ಹಲವರ ಶ್ಲಾಘನೆಯ ಹಿಂದೆ ಪ್ರೋತ್ಸಾಹದ ನುಡಿಗಳಿವೆ. ಆಗ ನಾನು ಎಂಟನೆಯ ಕ್ಲಾಸ್. ಶಾಲೆಯಲ್ಲಿ ನಡೆಯುವ ಭಾಷಣ ಸ್ಪರ್ಧೆಗೆ ಅವರೆ ಹೆಸರು ಬರೆಯಿಸಿ, ತಾವೇ ಭಾಷಣ ಬರೆದು ತಯಾರಿ ಮಾಡಿಸಿದ್ದರು. ನಾನು ಮಾಡಿದ ಭಾಷಣಕ್ಕೆ ಯಾವ ಬಹುಮಾನ ದೊರೆಯದಿದ್ದರೂ ನನಗೆ ಶಿಕ್ಷಕರು ಹೇಳಿದ್ದಾರೆ ನೀನೂ ಚೆನ್ನಾಗಿಯೇ ಮಾಡಿದ್ದಿಯಂತೆ ಎಂದು ಪ್ರಯತ್ನವನ್ನು ಹೊಗಳಿದರೆ ವಿನಃ ನನ್ನ ಸೋಲು ಗೆಲುವಿನ ವಿಮರ್ಶೆ ಮಾಡಲಿಲ್ಲ. ಈಗ ಬಹಳ ವರ್ಷಗಳ ನಂತರ ನನ್ನ ಈವಾಗಿನ ಭಾಷಣವನ್ನು ಮೊಬೈಲ್ ನಲ್ಲಿ ಕೇಳುತ್ತಿದ್ದರು. ಮೆಚ್ಚುತ್ತಲೂ ಇದ್ದರು. ಆದರೆ, ಆ ಮಾತುಗಳ ಶೈಲಿಯನ್ನು ಅಂದು ಅವರೇ ನನಗೆ ಹೇಳಿಕೊಟ್ಟಿದ್ದು ಎಂಬುದನ್ನು ಅವರು ಮರೆತೇ ಬಿಟ್ಟಿದ್ದರು.
ನಾನು ಮೊದಲ ಬಾರಿಗೆ ಶಾಸಕನಾದಾಗ ಅಪ್ಪ ಪಟ್ಟ ಖುಷಿ ಅಷ್ಟಿಷ್ಟಲ್ಲ. ಆದರೆ, ಆ ಸಂತಸದ ಕ್ಷಣದಲ್ಲೂ ಅವರು ಸಾರ್ವಜನಿಕ ಜೀವನದಲ್ಲಿ ತಪ್ಪು ಮಾಡಬೇಡ ಎಂದು ಕಠಿಣ ದ್ವನಿಯಲ್ಲಿ ಎಚ್ಚರಿಕೆ ನೀಡಿದ್ದರು. ಸಣ್ಣಪುಟ್ಟ ಲೋಪಗಳಾದಾಗ ನೀನು ಮಾಡಿದ್ದು ನನಗೆ ಸರಿ ಅನ್ನಿಸುತ್ತಿಲ್ಲ ಕಣೋ ಎಂದು ನಿರ್ದಾಕ್ಷಿಣ್ಯವಾಗಿ ಎಚ್ಚರಿಸುತ್ತಿದ್ದರು. ಆ ನ್ಯಾಯದ, ವಿಮರ್ಶೆಯ ದೃಢವಾದ ಧ್ವನಿ ಇನ್ನು ನನ್ನ ಆತ್ಮದಲ್ಲಿ ಅಂತರ್ಗತವಾದ ಅಪ್ಪನಲ್ಲಿಯೇ ಹುಡುಕಬೇಕಿದೆ.
ಅವರು ಐಶಾರಾಮಿ ಬದುಕನ್ನು ಕಂಡವರಲ್ಲ, ಅದು ಅವರಿಗೆ ಗೊತ್ತೇ ಇರಲಿಲ್ಲ. ಅಂತಹ ಜೀವನದ ಲೋಭವನ್ನು ನನಗೆ ಸಂಘ ಹೇಳಿಕೊಟ್ಟಿಲ್ಲ ಎನ್ನುತ್ತಿದ್ದರು. ಅವರು ಕಳೆದ ಎರಡು ವರ್ಷದಿಂದ ಅನಾರೋಗ್ಯದ ಕಾರಣ ಹೆಚ್ಚಾಗಿ ಆಸ್ಪತ್ರೆಯಲ್ಲೇ ಇರುತ್ತಿದ್ದರು. ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ. ಮಾತಾಡಿದೆಯಲ್ಲ, ಆಯ್ತು, ಹೋಗು ನಿನ್ನ ಕೆಲಸ ಮಾಡು ಎಂದು ಕರ್ತವ್ಯ ನೆನಪಿಸುತ್ತಿದ್ದರು. ಎರಡು ದಿನಗಳ ಹಿಂದೆ ಐಸಿಯುನಲ್ಲಿ ಇದ್ದಾಗಲೂ ಕೈ ಸನ್ನೆಯ ಮೂಲಕವೇ ಹೋಗು ಎಂದು ಸೂಚಿಸಿದ್ದರು.
ಅನಾರೋಗ್ಯದಲ್ಲಿದ್ದ ನಿಮ್ಮನ್ನು ಅಮ್ಮ, ನನ್ನ ಪತ್ನಿ ಪ್ರಿಯಾಂಕಾ, ಡಾ. ಶಶಿಕಿರಣ್ ಚೆನ್ನಾಗಿ ನೋಡಿಕೊಂಡಿದ್ದಾರೆ. ಹೌದು… ನೀವೀಗ ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ, ನನ್ನ ಜನಸೇವೆಯಲ್ಲಿ ನೀವು ಸದಾ ಇರುತೀರಿ. ನನ್ನ ಆದರ್ಶಗಳಲ್ಲಿ, ನನ್ನ ಸಂಸ್ಕಾರದಲ್ಲಿ, ನನ್ನ ಕರ್ತವ್ಯದ ಕಾರ್ಯದಲ್ಲಿ ನನ್ನ ಗೆಲುವಲ್ಲಿ, ಬದುಕಲ್ಲಿ ನನ್ನ ಆತ್ಮದಲ್ಲಿ, ಅಂತರ ತಮವ ಓಡಿಸುವ ಜ್ಞಾನದ ಬೆಳಕಾಗಿ ಸದಾ ಜೀವಂತವಾಗಿ ಇರುತ್ತೀರಿ.
-ಇಂತಿ
ವಾಸುದೇವ ಸುನೀಲ್ ಕುಮಾರ್.
Leave feedback about this