ಬೆಂಗಳೂರು:- ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ತನ್ನದೇ ಆದಂತ ಶಿಕ್ಷಣ ನೀತಿಯನ್ನು ರೂಪಿಸುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಆ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಸಲ್ಲಿಸಲು ರಾಜ್ಯ ಶಿಕ್ಷಣ ಆಯೋಗವನ್ನು ರಚಿಸಲಾಗಿತ್ತು. ಇಂತಹ ಆಯೋಗವು ಸರ್ಕಾರಕ್ಕೆ ತನ್ನ ರಾಜ್ಯ ಶಿಕ್ಷಣ ನೀತಿಯ ಕುರಿತಂತೆ ವರದಿಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಆಯೋಗವನ್ನು ಕರ್ನಾಟಕ ಸರ್ಕಾರವು ಅಕ್ಟೋಬರ್ 11, 2023 ರ ಸರ್ಕಾರಿ ಆದೇಶದ ಮೂಲಕ ರಾಜ್ಯಕ್ಕೆ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ನೇಮಿಸಿತು. ಪ್ರೊ. ಸುಖ್‌ದೇವ್ ಥೋರಾಟ್ ಅವರ ಅಧ್ಯಕ್ಷತೆಯಲ್ಲಿ 17 ಸದಸ್ಯರು, 6 ವಿಷಯ ತಜ್ಞರು/ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ಈ ಆಯೋಗ ಕಾರ್ಯಾರಂಭ ಮಾಡಿತು.
ಆಯೋಗವು ನವಂಬರ್ 1, 2025 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಆಯೋಗವು ಶಾಲಾ ಶಿಕ್ಷಣಕ್ಕಾಗಿ 16, ಉನ್ನತ ಶಿಕ್ಷಣಕ್ಕಾಗಿ 16, ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ 3 ಹೀಗೆ ಒಟ್ಟು 35 ಕಾರ್ಯಪಡೆಗಳನ್ನು ರಚಿಸಿತು, ಇದು ಒಂದು ಬೃಹತ್ ಯೋಜನೆಯಾಗಿದ್ದು, ಒಟ್ಟು 379 ತಜ್ಞರು 35 ಕಾರ್ಯಪಡೆಗಳಲ್ಲಿ ಸಕ್ರಿಯ ಸದಸ್ಯರಾಗಿ ಭಾಗವಹಿಸಿದ್ದರು. ಇವರಲ್ಲಿ ಶಾಲಾ ವಲಯದಲ್ಲಿ 166, ಉನ್ನತ ಶಿಕ್ಷಣದಲ್ಲಿ 170 ಮತ್ತು ವೃತ್ತಿಪರ ಶಿಕ್ಷಣದಲ್ಲಿ ಸುಮಾರು 43 ತಜ್ಞರು ಇದ್ದರು.
ಕಾಲಕ್ರಮೇಣ, ಆಯೋಗವು 42 ಸಭೆಗಳನ್ನು ನಡೆಸಿತು ಮತ್ತು ಕಾರ್ಯಪಡೆಗಳು 132 ಸಭೆಗಳನ್ನು ನಡೆಸಿದವು, ಇದು ಸುಮಾರು 2775 ಮಾನವ ದಿನಗಳ ಕೆಲಸಕ್ಕೆ ಸಮನಾಗಿದೆ, ಆಯೋಗವು ವಿವಿಧ ಪಾಲುದಾರರೊಂದಿಗೆ: ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ 59 ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 73 ಸಂವಾದಗಳನ್ನು ನಡೆಸಿತು.
ಆಯೋಗವು ತನ್ನ ಮಧ್ಯಂತರ ವರದಿಯನ್ನು ಮಾರ್ಚ್ 2024 ರಲ್ಲಿ ಸಲ್ಲಿಸಿತು, ಇದು ಪದವಿಯ ಅವಧಿ, ಬಹು ಪ್ರವೇಶ ಮತ್ತು ನಿರ್ಗಮನ ಮತ್ತು ಸಾಮಾನ್ಯ ಶಿಕ್ಷಣದ ಪಠ್ಯಕ್ರಮದ ವಿಷಯಗಳನ್ನು ಕುರಿತಾಗಿತ್ತು. ಸರ್ಕಾರವು ಇದರ ಬಹುಪಾಲು ಶಿಫಾರಸುಗಳನ್ನು ಅಂಗೀಕರಿಸಿ ಸರ್ಕಾರಿ ಅದೇಶವನ್ನು ಹೊರಡಿಸಿತು.
ಆಯೋಗದ ಅಂತಿಮ ವರದಿಯನ್ನು ಮೂರು ಸಂಪುಟಗಳಲ್ಲಿ ಕ್ರೋಢೀಕರಿಸಲಾಗಿದೆ. ಸಂಪುಟ 1A ಮತ್ತು 1B ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 580 ಪುಟಗಳನ್ನು ಹೊಂದಿದ, ಸಂಪುಟ 2A ಮತ್ತು 2B ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 455 ಪುಟಗಳನ್ನು ಹೊಂದಿದ ಮತ್ತು ವೃತ್ತಿಪರ ಶಿಕ್ಷಣಕ್ಕ ಸಂಬಂಧಿಸಿದ ಸಂಪುಟ 3 ಸುಮಾರು 450 ಪುಟಗಳನ್ನು ಹೊಂದಿದೆ, ಈ ವರದಿಯು ಒಟ್ಟು 2197 ಪುಟಗಳನ್ನು ಒಳಗೊಂಡಿದೆ, ಅದರಲ್ಲಿ 617 ಕೋಷ್ಟಕಗಳು, 47 ಚಿತ್ರಗಳು, 16 ಗ್ರಾಫ್‌ಗಳು, 8 ಚಿತ್ರಗಳು ಮತ್ತು 619 ಪುಟಗಳ ಅನುಬಂಧಗಳು ಇದ್ದವು.
ಆಯೋಗದ ಶಿಫಾರಸುಗಳನ್ನು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳುವಳಿಕೆಯ ಆಧಾರದ ಮೇಲೆ ರೂಪಿಸಲಾಗಿದೆ. ಲಭ್ಯವಿರುವ ಎಲ್ಲಾ ಅಧಿಕೃತ ದತ್ತಾಂಶಗಳು ಮತ್ತು ವಿವಿಧ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳ ಅಧಾರದ ಮೇಲೆ ಕರ್ನಾಟಕದ ಶಾಲಾ ಮತ್ತು ಉನ್ನತ ಶಿಕ್ಷಣ ವಲಯಗಳು ಇಂತಹ ನಿಕಟ ಪರಿಶೀಲನೆಗೆ ಒಳಪಟ್ಟಿರುವುದು ಇದೇ ಮೊದಲ ಬಾರಿಗೆ ಎನ್ನಬಹುದು, ಆದ್ದರಿಂದ, ಶಿಫಾರಸುಗಳು ಅಪಾರವಾದ ಪ್ರಾಯೋಗಿಕ ದತ್ತಾಂಶ, ಮಾಹಿತಿ, ಮತ್ತು ದಶಕಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರ ಅನುಭವಗಳ ಆಧಾರದ ಮೇಲೆ ರಚಿತವಾಗಿವೆ.
Leave feedback about this