ಬೆಂಗಳೂರು

ಶಿವಣ್ಣನನ್ನು ಭೇಟಿಯಾಗಲು ದಿನವಿಡೀ ಕಾದರೂ ಮನುಗೆ ಗೇಟ್‌ ಬಂದ್ 

ಬೆಂಗಳೂರು:- ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಒಂದು ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದು ಮೇಲೆ ಹೊರ ಬಂದಾಗಿದೆ, ನಟ ಈ ಕೇಸ್‌ನಲ್ಲಿ ಬಂಧನವಾದಾಗ ಆಡಿಯೋವೊಂದು ವೈರಲ್‌ ಆಗಿತ್ತು. ಇದು ಮಡೆನೂರು ಮನು ಮಾತನಾಡಿರುವುದು ಎಂಬ ಆರೋಪ ಕೇಳಿ ಬಂದಿತ್ತು. ಇದರಲ್ಲಿ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸೇರಿದಂತೆ ಸ್ಯಾಂಡಲ್‌ವುಡ್‌ ನಟರ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು.

ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಹೀಗಾಗಿ ಕ್ಷಮೆ ಕೇಳಲು ನಟ ಶಿವರಾಜ್‌ಕುಮಾರ್‌ ಅವರ ನಿವಾಸದ ಬಳಿ ಮಡೆನೂರು ಮನು ತಮ್ಮ ಕುಟುಂಬದೊಂದಿಗೆ ತೆರಳಿದ್ದು, ಶಿವಣ್ಣನಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಮನು ಶಿವಣ್ಣನನ್ನು ಭೇಟಿಯಾಗಲು ದಿನವಿಡೀ ಕಾದರೂ ಗೇಟ್‌ ಓಪನ್‌ ಮಾಡಲೇ ಇಲ್ಲ.

ಶಿವಣ್ಣನ ನಿವಾಸ ಶ್ರೀಮುತ್ತು ಮುಂದೆ ತನ್ನ ಮಗು, ಪತ್ನಿ ಜೊತೆ ಮಡೆನೂರು ಮನು ನಿಂತು ಕಾದಿದ್ದಾರೆ. ಎಷ್ಟೇ ಕಾದರೂ ಶಿವಣ್ಣ ಮನೆ ಗೇಟ್‌ ತೆರೆಯಲೇ ಇಲ್ಲ. ಹಗಲು ರಾತ್ರಿ ಎನ್ನದೇ ಮಡೆನೂರು ಮನು ಶಿವಣ್ಣನಿಗಾಗಿ ಕಾಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮನು ಅರೆಸ್ಟ್‌ ಆದಾಗ ಆಡಿಯೋ ವೈರಲ್‌ ಆಗಿತ್ತು. ಅದರಲ್ಲಿ ಶಿವಣ್ಣ, ದರ್ಶನ್ ಇನ್ನು ಕೆಲವೇ ವರ್ಷದಲ್ಲಿ ಸಾಯುತ್ತಾರೆ ಎಂದು ಹೇಳಲಾಗಿತ್ತು.‌ ಈ ಆಡಿಯೋ ಮಡೆನೂರು ಮನುದು ಎಂದೇ ಹೇಳಲಾಗಿತ್ತು. ಈ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಮಡೆನೂರು ಮನು ವಿರುದ್ಧ ಶಿವಣ್ಣನ ಅಭಿಮಾನಿಗಳು ಕೂಡ ಕೆರಳಿದ್ದರು. ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಫಿಲಂ ಚೇಂಬರ್‌ ಕೂಡ ಈ ಆರೋಪ ಸುಳ್ಳು ಎಂದು ಸಾಬೀತಾಗುವವರೆಗೆ ಮನು ಮೇಲೆ ನಿಷೇಧ ಹೇರುವುದಾಗಿ ತಿಳಿಸಿತ್ತು.