ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡುಹಿನಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಕೊಪ್ಪದಲ್ಲಿ ವಿಜ್ಞಾನಿಗಳ ನಡೆ- ರೈತರ ಕಡೆ, ಎಂಬ ಶೀರ್ಷಿಕೆಯಡಿ ಕೇಂದ್ರ ಸರ್ಕಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ (ಕೆ ವಿ ಕೆ) ಬೇಸಾಯ ಶಾಸ್ತ್ರದ ವಿಜ್ಞಾನಿ ಡಾಕ್ಟರ್ ಯಮುನಾ ಹೇಳಿದ್ದಾರೆ. ಅವರು ಸೋಮವಾರದಂದು ದ್ವಾಕ್ರಾ ಕಾರ್ಯಾಗಾರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಅವರು ಅಭಿಯಾನದ ಮುಖ್ಯ ಉದ್ದೇಶವೆಂದರೆ ಮುಂಗಾರಿನಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಸಂಬಂಧಪಟ್ಟಂತೆ ಇರುವ ಉಪತಂತ್ರಜ್ಞಾನ, ಹೊಸ ತಳಿಗಳು ಯಾವುವು? ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಿದ್ದಾರಾ ಎಂಬುದನ್ನು ಅಥವಾ ಅಳವಡಿಸಿಕೊಳ್ಳಲು ಏನು ಸಮಸ್ಯೆಗಳಿವೆ ಎಂಬುದನ್ನು ಅವಲೋಕಿಸಬೇಕಾಗಿದೆ. ಗುಡ್ಡಗಾಡು ಪ್ರದೇಶ, ಮಲೆನಾಡು ಪ್ರದೇಶವಾದ್ದರಿಂದ ಅಡಿಕೆ, ಕಾಫಿ,ಕಾಳುಮೆಣಸು,ಏಲಕ್ಕಿ ಬೆಳೆಯುವಲ್ಲಿ ಏನೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆ ಅಥವಾ ಅವುಗಳನ್ನು ಯಾವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವ ಬಗ್ಗೆ ರೈತರಿಂದಲೇ ಸಂವಾದ ನಡೆಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಅಭಿಯಾನ ಕಾರ್ಯಪ್ರವೃತವಾಗಿದೆ. ರೈತರು ನಿಮ್ಮ ಕೃಷಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮೊಂದಿಗೆ ಮುಕ್ತವಾಗಿ ಚರ್ಚಿಸಬಹುದಾಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆಗೆ ಸಂಬಂಧಪಟ್ಟಂತೆ ಸರ್ಕಾರ ಹೊಸ ಯೋಜನೆಗಳ ಬಗ್ಗೆ ರೈತರು ಮಾಹಿತಿ ಪಡೆಯಬಹುದಾಗಿದೆ ಎಂದ ಅವರು ಪ್ರತಿ ಎರಡು ಮೂರು ವರ್ಷಕ್ಕೊಮ್ಮೆ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಭೂಮಿಗೆ ಬೇಕಾದ ಪೋಷಕಾಂಶಗಳ ಗೊಬ್ಬರಗಳನ್ನು ನೀಡಬೇಕು ಎಂದರು.
ಇನ್ನೋರ್ವ ಅತಿಥಿ ಬೆಂಗಳೂರಿನ ಆಡುಗೋಡಿಯ ಅನಿಮಲ್ ನ್ಯೂಟ್ರಿಷಿಯನ್ ಅಂಡ್ ಪಿಜಿಯಾಲಾಜಿ ವಿಜ್ಞಾನಿ ಡಾಕ್ಟರ್ ಚಂದ್ರಪ್ಪ ಮಾತನಾಡಿ, ರೈತರಿಗೆ ಪಶುಪಾಲನೆ ಕೂಡ ಒಂದು ಪ್ರಮುಖ ಆದಾಯದ ಉಪ ಕೃಷಿ ಚಟುವಟಿಕೆ ಆಗಿದೆ. ಈಗ ಅದು ಉದ್ದಿಮೆಯಾಗಿ ಬೆಳೆಯುತ್ತಿದೆ. ಪಶುಪಾಲನೆಯಿಂದ ಅನೇಕ ಉಪಯೋಗಗಳಿವೆ, ಹಾಲಿನ ಇಳುವರಿಯ ಕಡೆ ರೈತರು ಹೆಚ್ಚು ಗಮನ ಹರಿಸಬೇಕಾಗಿದೆ, ಇದಕ್ಕಾಗಿ ಪಶುಗಳಿಗೆ ಉತ್ತಮ ಆಹಾರ ನೀಡಬೇಕು. ಹಸಿ ಹುಲ್ಲು, ಒಣಹುಲ್ಲು, ಹಿಂಡಿ, ನುಚ್ಚು, ತೌಡು, ಉಪ್ಪು ಎಲ್ಲವನ್ನು ನಿಗದಿಗೊಳಿಸಿದ ಪ್ರಮಾಣದಲ್ಲಿ ನೀಡಬೇಕು. ಪಶುಗಳಿಗೆ ಬರುವ ಮಾರಕ ರೋಗಗಳ ನಿಯಂತ್ರಣಕ್ಕಾಗಿ ಮುಂಜಾಗ್ರತವಾಗಿ ಲಸಿಕೆ ಹಾಕಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಹಿನಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ಎ.ಬಿ ಮಂಜುನಾಥ್, ವಾಣಿ ನರೇಂದ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಂದ್ಯಾ, ರೈತರು ಉಪಸ್ಥಿತರಿದ್ದರು.