ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ನಿಜಕ್ಕೂ ಆತಂಕದ ವಿಚಾರವಾಗಿದೆ. ಈ ಬಗ್ಗೆ ಸಂಸದ, ಹೃದಯ ತಜ್ಞ ಡಾ|ಸಿ.ಎನ್ ಮಂಜುನಾಥ್ ಪ್ರಧಾನಿ ಮೋದಿಯವರೊಂದಿಗೆ ಸ್ಟೆಮಿಯೋಜನೆ ಬಗ್ಗೆ ಅತೀ ಶೀಘ್ರವಾಗಿ ಚರ್ಚೆ ಮಾಡಲಿದ್ದಾರೆ.
ರಾಜ್ಯದಲ್ಲಿ ಈ ಹೃದಯಾಘಾತಕ್ಕೆ ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದೆ. ಅದರಲ್ಲೂ ಹಾಸನ ಜಿಲ್ಲೆಯೊಂದರಲ್ಲೇ ಕಳೆದ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಚಿಂತನೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಹಾಗಾಗಿ ಕೆಲ ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆಯನ್ನ ಆರಂಭಿಸುವ ಬಗ್ಗೆ ಮೋದಿಯೊಂದಿಗೆ ಮಂಜುನಾಥ್ ಅವರು ಚರ್ಚೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸ್ಟೆಮಿಯೋಜನೆ ಎಂದರೇನು:
ಎದೆ ನೋವು ಇರುವ ರೋಗಿಗಳ ಇಸಿಜಿ ರಿಪೋರ್ಟ್ ಜಯದೇವ ಆಸ್ಪತ್ರೆಗೆ ಅಪ್ಲೋಡ್ ಮಾಡಿದರೆ ಆಸ್ಪತ್ರೆಯ ವೈದ್ಯರು ಅದನ್ನು ನೋಡಿ ಚಿಕಿತ್ಸೆ ಬಗ್ಗೆ ತಿಳಿಸುತ್ತಾರೆ. ಈ ಮೂಲಕ ಉನ್ನತ ಮಟ್ಟದಲ್ಲಿ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು.
ಹಾಸನ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಹೊಳೆನರಸೀಪುರ ಹಾಗೂ ಅರಸೀಕೆರೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಯೋಜನೆ ಜಾರಿಯಲ್ಲಿದ್ದು, ಸಕಲೇಶಪುರ, ಅರಕಲಗೂಡು, ಬೇಲೂರು, ಆಲೂರು, ಹಾಗು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನ ಆರಂಭ ಮಾಡುವಂತೆ ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಅನಿಲ್ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೃದಯಾಘಾತಕ್ಕೆ ಸಂಬಂಧಿಸಿದಂತೆ ರೋಗವನ್ನ ಪತ್ತೆ ಹಚ್ಚಲು ಹಾಗೂ ಚಿಕಿತ್ಸೆ ನೀಡಲು ಈ ಯೋಜನೆ ಸಹಾಯ ಮಾಡುತ್ತದೆ. ಇದರಿಂದ ಅನೇಕ ಜನರ ಪ್ರಾಣ ಉಳಿಸಬಹುದಾಗಿದೆ.