ಬೆಂಗಳೂರು:- ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ನೋಟಿಸ್ ನೀಡುತ್ತಿರುವುದನ್ನು ನಿಲ್ಲಿಸದೇ ಇದ್ದರೆ, ಎಲ್ಲಾ ಡಿಪೋಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಂಟಿಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.
ನಿನ್ನೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮುಷ್ಕರವನ್ನು ಸಾರಿಗೆ ನಿಗಮಗಳ ನೌಕರರ ಜಂಟಿಕ್ರಿಯಾ ಸಮಿತಿ ಮುಂದೂಡಿದೆ. ನಾಳೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಜಂಟಿಕ್ರಿಯಾ ಸಮಿತಿ ಮುಖಂಡರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಮುಷ್ಕರ ನಡೆದಿತ್ತು, ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಮಿಕ ಮುಖಂಡರಿಗೆ ಛೀಮಾರಿ ಹಾಕಿತ್ತು. ಇದು ಸರ್ಕಾರಕ್ಕೆ ಆನೆಬಲ ತಂದುಕೊಟ್ಟಿದೆ.
ನಿನ್ನೆ ಸಂಜೆಯಿಂದಲೇ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರು ಹಾಗೂ ಸಿಬ್ಬಂದಿಗೆ ಸಾರಿಗೆ ನಿಗಮಗಳು ನೋಟಿಸ್ ನೀಡಲಾರಂಭಿಸಿವೆ. ಮುಷ್ಕರದಲ್ಲಿ ಭಾಗಿಯಾಗಿದ್ದವರನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ.ಜಂಟಿಕ್ರಿಯಾ ಸಮಿತಿಯನ್ನು ನಂಬಿ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾವಿರಾರು ಮಂದಿ ಈಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನಿಗಮಗಳ ಹಿರಿಯ ಅಧಿಕಾರಿಗಳು ವಾಟ್‌್ಸಆಯಪ್ ಮೂಲಕವೇ ನೋಟಿಸ್‌ಗಳನ್ನು ಕಳುಹಿಸಿ ತ್ವರಿತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ.
ಹೈಕೋರ್ಟ್ ಖುದ್ದಾಗಿ ಮುಷ್ಕರಕ್ಕೆ ಕಡಿವಾಣ ಹಾಕಿದ್ದರಿಂದ ನಿಗಮದ ಹಿರಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಕ್ರಮಗಳು ಊರ್ಜಿತಗೊಳ್ಳಬಹುದು ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ನೋಟಿಸ್ ಪಡೆದ ಸಿಬ್ಬಂದಿಗಳು ಆತಂಕದಲ್ಲಿದ್ದು, ರಕ್ಷಣೆಗಾಗಿ ಜಂಟಿಕ್ರಿಯಾ ಸಮಿತಿಯ ಮೊರೆ ಹೋಗಿದ್ದಾರೆ.
ಈ ಮೊದಲು ಹಲವಾರು ಸಂದರ್ಭಗಳಲ್ಲಿ ಮುಷ್ಕರ ನಡೆದಾಗ ಹಲವಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸ್ವಂತ ಖರ್ಚಿನಲ್ಲಿ ಕಾನೂನು ಹೋರಾಟ ನಡೆಸಿ ಮರು ನೇಮಕವಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿಯೂ ಅದೇ ರೀತಿಯಾಗಬಹುದು ಎಂಬ ಆತಂಕ ಸಾವಿರಾರು ನೌಕರರಲ್ಲಿದೆ. ಯಾವುದೇ ನೌಕರರಿಗೆ, ಕಾರ್ಮಿಕರಿಗೆ ತೊಂದರೆಯಾಗಲು ನಾವು ಅವಕಾಶ ನೀಡುವುದಿಲ್ಲ. ಜಂಟಿಕ್ರಿಯಾ ಸಮಿತಿ ಸಿಬ್ಬಂದಿಗಳ ಬೆಂಬಲಕ್ಕಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ಅಣತಿಯಂತೆ ನಿಗಮದ ಹಿರಿಯ ಆಧಿಕಾರಿಗಳು ನೋಟಿಸ್ ನೀಡುವುದನ್ನು ನಿಲ್ಲಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಎಲ್ಲಾ ಡಿಪೋಗಳ ಮುಂದೆ ಹೋರಾಟ ನಡೆಸಲಾಗುವುದು ಹಾಗೂ ಕಾನೂನಾತಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಡಿಪೋಗಳನ್ನು ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಸರ್ಕಾರಕ್ಕೆ 22 ದಿನಗಳ ಮುಂಚಿತವಾಗಿಯೇ ನೋಟಿಸ್ ನೀಡಿ, ನಾವು ಮುಷ್ಕರ ನಡೆಸಿದ್ದೇವೆ. ನಿಯಮ ಬಾಹಿರವಾಗಿ ಯಾವುದೇ ಹೆಜ್ಜೆ ಇಟ್ಟಿಲ್ಲ ಎಂಬ ಸಮರ್ಥನೆಯನ್ನು ಜಂಟಿಕ್ರಿಯಾ ಸಮಿತಿಯ ಮುಖಂಡರು ನೀಡುತ್ತಿದ್ದಾರೆ.
ಸರ್ಕಾರ ಸರಿಯಾದ ವೇತನ ನೀಡದೆ ಮುಷ್ಕರಕ್ಕೂ ಅಡ್ಡಿಪಡಿಸಿ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ವೇತನ ಪರಿಷ್ಕರಣೆಯಾಗಿದ್ದರೆ ನಾವು ಪ್ರತಿಭಟನೆ ನಡೆಸುವ ಸಂದರ್ಭ ಬರುತ್ತಿರಲಿಲ್ಲ. ಇದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮುಖಂಡರು ಹೇಳುತ್ತಿದ್ದಾರೆ.
Leave feedback about this