ಬೆಂಗಳೂರು

ಸಾವಿನ ಮನೆಯ ರಾಜಕೀಯ ಬಿಡಿ: ಜನರ ಭಾವನೆಗಳನ್ನು ಕೆರಳಿಸಿ ಬೆಳೆ ಬೇಯಿಸಿಕೊಳ್ಳಬೇಡಿ.- ಹರಿಪ್ರಸಾದ್

ಬೆಂಗಳೂರು:- ಆರ್ ಸಿಬಿ ತಂಡದ ಐಪಿಎಲ್ ಚಾಂಪಿಯನ್ ವಿಜಯೋತ್ಸವದ ಸಂದರ್ಭ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರಾಜ್ಯ ಇಂಟೆಲಿಜೆನ್ಸ್ ಏನು ಕತ್ತೆ ಕಾಯುತ್ತಾ ಇತ್ತೇ ಎಂದು ಟೀಕಿಸಿದ್ದರು. ಕೇಂದ್ರ ಸಚಿವರ ಟೀಕೆಗೆ ಬಿ.ಕೆ.ಹರಿಪ್ರಸಾದ್ ಅವರು ತನ್ನ ‘ಎಕ್ಸ್’ನಲ್ಲಿ ಸರಣಿ ಪ್ರಶ್ನೆಗಳ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

ಪ್ರಹ್ಲಾದ್ ಜೋಶಿ ಅವರೇ, ಸಾವಿನಲ್ಲಿ ರಾಜಕೀಯ ಮಾಡೋದು ಬಿಜೆಪಿಯವರಿಗೆ ಹೊಸದಲ್ಲ, ಅದಕ್ಕೆ ತನ್ನದೇ ಆದ ಪರಂಪರೆ ಇದೆ. ಆರ್ ಸಿಬಿ ಪಂದ್ಯದ ಮೆರವಣಿಗೆಯಲ್ಲಿ ಆದ ಲೋಪಗಳಿಗೆ ಭಾರಿ ಬೆಲೆ ತೆತ್ತಿದ್ದೇವೆ. ಸೂತಕದ ಮನೆಯ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಬರಬೇಡಿ ಎಂದು ಕಡ್ಡಿ ತುಂಡಾಗುವ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಪುಲ್ವಾಮಾದಲ್ಲಿ ಭಾರತದ ಗಡಿಯಿಂದಲೇ ಉಗ್ರರು 350 ಕೆಜಿ ಆರ್ ಡಿಎಕ್ಸ್ ಬಾಂಬ್ ದಾಳಿ ನಡೆಸಿ, ಭಾರತೀಯ ನಲವತ್ತು ಸೈನಿಕರನ್ನು ಬಲಿ ಪಡೆದುಕೊಂಡಾಗ ನಿಮ್ಮ ಕೇಂದ್ರದ ಗೃಹ ಇಲಾಖೆ ಕತ್ತೆ ಮೇಯಿಸುತ್ತಿತ್ತಾ? ಸೈನಿಕರಿಗೆ ಭದ್ರತೆ ಇಲ್ಲದ ಕೇಂದ್ರದ ಇಂಟಲಿಜೆನ್ಸ್ ಕತ್ತೆ ಮೇಯಿಸುವುದಕ್ಕೂ ಲಾಯಕ್ ಇದಿಯಾ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ ಅವರು ಪಹಲ್ಗಾಮ್ ನಲ್ಲಿ ಸಶಸ್ತ್ರಧಾರಿ ಉಗ್ರರು ಅಮಾಯಕ 26 ಪ್ರವಾಸಿಗರನ್ನು ಕಗ್ಗೊಲೆ ಮಾಡುವಾಗ ಕೇಂದ್ರದ ಸುಪರ್ದಿಯಲ್ಲಿರುವ, ಕಾಶ್ಮೀರದಲ್ಲೇ ಬೀಡು ಬಿಟ್ಟಿರುವ ನಿಮ್ಮ ಇಂಟಲಿಜೆನ್ಸ್ ಕತ್ತೆ ಕಾಯ್ತಿದ್ರಾ?

ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲಾಗಿದೆ, ಜಗತ್ತಿನಲ್ಲೇ ಅತಿ ದೊಡ್ಡ ಡ್ರಗ್ಸ್ ಸೀಝ್ ಆಗಿದ್ದು ಗುಜರಾತಿನ ಅದಾನಿ ಬಂದರಿನಲ್ಲಿ. ಸುಮಾರು 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಝ್ ಆಗಿತ್ತು. ಮತ್ತೊಮ್ಮೆ ಇದೇ ಬಂದರಿನಲ್ಲಿ 9 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಝ್ ಆಗುತ್ತಿರುವ ದಂಧೆಯ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಇಲ್ಲದೆ ಕತ್ತೆ ಕಾಯ್ತಿದ್ಯಾ?

ಸಾವಿರಾರು ಕೋಟಿ ರೂ. ಲೂಟಿಕೋರರಾದ ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ದೇಶ ಬಿಟ್ಟು ಓಡಿ ಹೋಗುವಾಗ ಕೇಂದ್ರದ ಇಂಟಲಿಜೆನ್ಸ್ ಕತ್ತೆ ಕಾಯ್ತಿತ್ತಾ?

ಸಾವಿನ ಮನೆಯ ರಾಜಕೀಯ ಬಿಡಿ, ಜನರ ಭಾವನೆಗಳನ್ನು ಕೆರಳಿಸಿ ಬೆಳೆ ಬೇಯಿಸಿಕೊಳ್ಳಬೇಡಿ, ಭಾರೀ ಬೆಲೆ ತೆರಬೇಕಾದೀತು ಎಂದು ಬಿಜೆಪಿಗೆ ಹರಿಪ್ರಸಾದ್ ಎಚ್ಚರಿಸಿದ್ದಾರೆ.