ಬೆಂಗಳೂರು:- ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳಲ್ಲಿ ಪ್ರಮುಖವಾಗಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿಯ 742 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯ ವಿಪತ್ತು ಉಪಶಪನ ನಿಧಿಯಡಿ ಅನುಮೋದಿಸಿರುವ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಶಿಲಹಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯ ಉಪನದಿಗೆ ಅಡ್ಡಲಾಗಿ ಹೈಲೆವೆಲ್ ಮೈನರ್ ಸೇತುವೆ ನಿರ್ಮಾಣ ಹಾಗೂ ಹುಬ್ಬಳ್ಳಿ ನಗರದ ರಾಜನಾಲಾಗೆ ತಡೆಗೋಡೆ ನಿರ್ಮಾಣ ಮಾಡುವ 23.51ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯಡಿ ರಾಯಚೂರು ಜಿಲ್ಲಾ ಕುರುಬರ ಸಂಘಕ್ಕೆ ಕನಕದಾಸ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ರಾಯಚೂರು ನಗರದ ಸಿಯತಲಾಬ್ ಬಡಲಾವಣೆಯಲ್ಲಿ ಖಾಲಿ ನಿವೇಶನವನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಆರ್ಯಭೋಗಪುರ ಗ್ರಾಮದ ಬಳಿ ಮಸ್ಕಿನಾಲಾದಿಂದ ಕನಕನಾಲಾ ಕಣಿವೆಗೆ ಪ್ರವಾಹದ ನೀರನ್ನು ತಿರುಗಿಸಲು ಮಸ್ಕಿನಾಲೆಯ ಮೇಲ್ಬಾಗದಲ್ಲಿ ಬ್ರಿಡ್ಜ್-ಕಂ ಬ್ಯಾರೇಜ್ ನಿರ್ಮಿಸಲು ಮತ್ತು ಕನಕನಾಲಾ ಆಧುನೀಕರಣ ಯೋಜನೆಯ 134.56 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನೊಳಗೊಂಡಂತೆ ಒಟ್ಟು 5959.322 ಹೆಕ್ಟೇರ್ ಪ್ರದೇಶವನ್ನು ಅಪ್ಸರಕೊಂಡ- ಮುಗಲಿ ಕಡಲ ವನ್ಯ ಜೀವಿಧಾಮ ಎಂದು ಘೋಷಿಸಲು ನಿರ್ಧರಿಸಲಾಯಿತು.
ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವ ಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕವಾಗಿ 5 ಲಕ್ಷಗಳವರೆಗೆ ನಗದು ರಹಿತ ಆರೋಗ್ಯ -ಯೋಜನೆಗೆ ಹಸಿರು ನಿಶಾನೆ ನೀಡಿದೆ. ಜೊತೆಗೆ ಸ್ಪೋಕ್ ಯೋಜನೆಯ 12.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದಿಸಿತು.
ಕಂದಾಯ ಇಲಾಖೆಯಡಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಸಾಪೂರ ಗ್ರಾಮದ ಹೆಸರನ್ನು ಗೇರುಗುಟ್ಟ ಬಸಾಪೂರ ಎಂದು ಮರುನಾಮಕರಣ ಮಾಡಲು ತೀರ್ಮಾನಕ್ಕೆ ಮುದ್ರೆ ಹಾಕಲಾಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚನ್ನಬಸವೇಶ್ವರ (ಒಳಬಳ್ಳಾರಿ) ಏತ ನೀರಾವರಿ ಯೋಜನೆಯ ಜಾಕ್ ವೆಲ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡುವ 43.10 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಡಿ ರಾಜ್ಯದ ದುರ್ಗಮ ಪ್ರದೇಶದ ಸ೦ಪರ್ಕ ರಹಿತ ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳನ್ನು ರೂ.15.97 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಮಾಡಲು ನಿರ್ಧಾರಕ್ಕೆ ಸಹಿ ಹಾಕಲಾಯಿತು.
ವಸತಿ ಇಲಾಖೆಯಡಿ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳಡಿ ಅಲ್ಪಸಂಖ್ಯಾತ ಸಮುದಾಯದವರಿಗೆ ನಿಗದಿ ಪಡಿಸಿರುವ ಶೇ 10ರ ಮೀಸಲಾತಿಯನ್ನು 15%ಗೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಯಿತು.
ಮಾವು ಬೆಳೆಗಾರರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಬೆಳೆಗಾರರಿಗೆ ಪರಿಹಾರವನ್ನು ಒದಗಿಸಿಕೊಡಲು ಕೇಂದ್ರವನ್ನು ಒತ್ತಾಯಿಸಲು ಕೃಷಿ ಸಚಿವರಿಗೆ ಸೂಚನೆ ನೀಡಲಾಗಿದೆ.