ಮೈಸೂರು:- ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಮೈಸೂರಲ್ಲಿ ವಿದ್ಯುಕ್ತ ಚಾಲನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದು, ಕೈ ನಾಯಕರ ದಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.
ಸಾಧನಾ ಸಮಾವೇಶದಲ್ಲಿ ಬರೋಬ್ಬರಿ 2578 ಕೋಟಿ ಮೌಲ್ಯದ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮೈಸೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ವೇದಿಕೆ ಮುಂಭಾಗ ಸಿಎಂ ಸಿದ್ದರಾಮಯ್ಯ ಭಾವಚಿತ್ರಗಳ ಪ್ರದರ್ಶನ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಫೋಟೋಗಳನ್ನು ಎತ್ತಿ ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಜಿ ಪರಮೇಶ್ವರ್, ಕೆ ವೆಂಕಟೇಶ್, ಕೆ.ಜೆ ಜಾರ್ಜ್, ರಹೀಮ್ ಖಾನ್, ಕೆ.ಹೆಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಶರಣಬಸಪ್ಪ ದರ್ಶನಾಪುರ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಎ.ಆರ್ ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಸಂಸದ ಸುನೀಲ್ ಬೋಸ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗು ನಟ ಸಾಧುಕೋಕಿಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ನಡೆದ ವಾರದೊಪ್ಪತ್ತಿನಲ್ಲೇ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಾಧನಾ ಸಮಾವೇಶ ನಡೆಸುವ ಮೂಲಕ ಇಂದು ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಈ ಸಾಧನಾ ಸಮಾವೇಶ ಸಿಎಂ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡುವುದೋ ಇಲ್ಲವೋ ಖಚಿತವಾಗದಿದ್ದರೂ ಸಮಾವೇಶದ ತುಂಬೆಲ್ಲಾ ಸಿಎಂ ಅವರ ಭಾವಚಿತ್ರ ರಾರಾಜಿಸುತ್ತಿದೆ.
ಸಮಾವೇಶದ ಪ್ರತಿಯೊಂದು ಚೇರ್ ನಲ್ಲೂ ಸಿಎಂ ಸಿದ್ದರಾಮಯ್ಯ ಭಾವಚಿತ್ರ ಇಟ್ಟಿರುವ ಅಭಿಮಾನಿಗಳು ತಮ್ಮ ಊರಿನ ಸಿಎಂ ಆಗಿರುವ ಸಿದ್ದರಾಮಯ್ಯ ಅವರ ಬಗೆಗೆ ತಮ್ಮ ಅಭಿಮಾನ ಮೆರೆದಿದ್ದಾರೆ. ವೇದಿಕೆಯ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಕುಳಿತುಕೊಳ್ಳುವ ಪ್ರತಿಯೊಂದು ಚೇರ್ ನಲ್ಲಿ ರಾರಾಜಿಸಿದ ಸಿಎಂ ಸಿದ್ದರಾಮಯ್ಯ ಫೋಟೊಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಅಭಿಮಾನಿ ಆನಂದ್ ಅವರು ಫೋಟೊ ಪ್ರಿಂಟ್ ಮಾಡಿ ಸಮಾವೇಶದ ತುಂಬೆಲ್ಲಾ ಹರಡುವ ವ್ಯವಸ್ಥೆ ಮಾಡಿದ್ದಾರೆ.
ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದಂತೆ ಫೋಟೊ ಎತ್ತಿ ಹಿಡಿದು ಸಿದ್ದರಾಮಯ್ಯರ ಶಕ್ತಿ ತೋರಿಸಲು ಪ್ಲಾನ್ ಮಾಡಲಾಗಿದ್ದು, ಚೇರ್ ನಲ್ಲಿ ಇಟ್ಟಿರುವ ಭಾವಚಿತ್ರದಲ್ಲಿ ಎಲ್ಲಿಯೂ ಡಿಸಿಎಂ ಡಿ.ಕೆ ಶಿವಕುಮಾರ್ ಚಿತ್ರ ಕಾಣದಿರುವುದು ಮತ್ತಷ್ಟು ಸ್ವಾರಸ್ಯಕ್ಕೆ ಕಾರಣವಾಗಿದೆ. ಸಾಧನಾ ಸಮಾವೇಶಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಫೋಟೋಗಳಿಗೂ ಸಮಾವೇಶದಿಂದ ಕೋಕ್ ಕೊಡಲಾಗಿದೆ.
ಭಾಷಣ ಆರಂಭದ ವೇಳೆ ಎಲ್ಲರಿಗೂ ಸ್ವಾಗತ ಮಾಡಲು ಮುಂದಾದ ಸಿದ್ಧರಾಮಯ್ಯ ಅವರಿಗೆ, ಡಿ.ಕೆ ಶಿವಕುಮಾರ್ ಹೆಸರು ಪ್ರಸಾಪಿಸಲಿಲ್ಲ ಎಂದು ಕಾಂಗ್ರೆಸ್ ಮುಖಂಡ ನಟ ಸಾಧುಕೋಕಿಲ ತಿಳಿಸಿದರು. ಈ ವೇಳೆ ಸಿಎಂ,ಸ್ವಾಗತ ಮಾಡೋದು ಇಲ್ಲಿ ಇರೋರಿಗೆ. ಮನೆಯಲ್ಲಿ ಕೂತಿರೋ ಅವರಿಗೆ ಅಲ್ಲ ಎಂದು ಹೇಳುವ ಮೂಲಕ ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆಯಿಂದ ಹೊರಟ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
Leave feedback about this